ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗದಿರುವುದು ತಾಂತ್ರೀಕ ಕಾರಣದಿಂದ : ಸರ್ಕಾರ ಗ್ಯಾರಂಟಿ ನಿಲ್ಲಿಸೋಲ್ಲ

KannadaprabhaNewsNetwork | Updated : Feb 21 2025, 01:10 PM IST

ಸಾರಾಂಶ

 ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗದಿರುವುದು ತಾಂತ್ರೀಕ ಕಾರಣದಿಂದಾಗಿಯೇ ಹೊರತು ಸರ್ಕಾರ ಯಾವುದೇ ಗ್ಯಾರಂಟಿಗಳನ್ನು ನಿಲ್ಲಿಸಿಲ್ಲ. 

  ಚಿಂತಾಮಣಿ : ತಾಲೂಕಿನ ಕರಿಯಪಲ್ಲಿ ಗ್ರಾಮದಲ್ಲಿ 13 ಲಕ್ಷ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಅಂಗನವಾಡಿ ಕಟ್ಟಡದ ಉದ್ಘಾಟನೆ, ಕಾಗತಿ ಗ್ರಾಮದ ಗ್ರಂಥಾಲಯ ಕಟ್ಟಡ ಕಾಮಗಾರಿ ಭೂಮಿ ಪೂಜೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ನೆರವೇರಿಸಿದರು.

ತಾಲೂಕಿನ ಕರಿಯಪಲ್ಲಿ ಮತ್ತು ಕಾಗತಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಅಂಗನವಾಡಿ ಮತ್ತು ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಮಂಗಳವಾರ ನೆರವೇರಿಸಿ ಮಾತನಾಡಿ, ೨ತಿಂಗಳಿನಿಂದ ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗದಿರುವುದು ತಾಂತ್ರೀಕ ಕಾರಣದಿಂದಾಗಿಯೇ ಹೊರತು ಸರ್ಕಾರ ಯಾವುದೇ ಗ್ಯಾರಂಟಿಗಳನ್ನು ನಿಲ್ಲಿಸಿಲ್ಲ ಎಂದರು.

ಗ್ಯಾರಂಟಿ ನಿಲ್ಲಿಸೋಲ್ಲ

ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಉದ್ದೇಶವಿಲ್ಲ ಎಂದರು.

ಕರಿಯಪಲ್ಲಿ ಗ್ರಾಮದ ಒಳಚರಂಡಿ ವ್ಯವಸ್ಥೆಗೆ ೪೦ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗೆ ೩೦ ಲಕ್ಷ ರು. ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ ಸರ್ಕಾರಿ ವ್ಯವಸ್ಥೆಯಲ್ಲಿ ಯೋಜನೆಗಳ ಅನುಮೋದನೆ ಪ್ರಕ್ರಿಯೆ ಹಂತಗಳನ್ನು ದಾಟಿ ಹಣಕಾಸು ಸಮಯಕ್ಕೆ ಬರಬೇಕಾಗುತ್ತದೆಂದರು.

ಶಾಲಾ ಕೊಠಡಿ ಉದ್ಘಾಟನೆ

ಪಣಸಚೌಡನಹಳ್ಳಿಯಲ್ಲಿ, ದೊಡ್ಡಗಂಜೂರು, ದೊಡ್ಡಬೊಮ್ಮನಹಳ್ಳಿ ಶಾಲಾ ಕೊಠಡಿಗಳ ಉದ್ಘಾಟನೆ, ಸಿದ್ದಿಮಠ, ಚಿಕ್ಕಪುರ, ಎಂ. ಗೊಲ್ಲಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸಚಿವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯದ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ತಹಸೀಲ್ದಾರ್ ಸುದರ್ಶನ್‌ ಯಾದವ್, ಇಒ ಎಸ್ ಆನಂದ್, ಉಪತಹಸೀಲ್ದಾರ್ ರಾಜೇಂದ್ರ, ಪೌರಾಯುಕ್ತ ಜಿ.ಎನ್.ಚಲಪತಿ, ಬಿಇಒ ಉಮಾದೇವಿ, ಸಿಡಿಪಿಒ ಮಹೇಂದ್ರ ಬಾಬು, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಜಯರಾಮರೆಡ್ಡಿ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮುನಿವೆಂಕಟಪ್ಪ, ಪರಿಶಿಷ್ಟ ಪಂಗಡದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ಕುರುಟಹಳ್ಳಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Share this article