ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಸರಳ ಕಾನೂನುಗಳ ಕುರಿತಾಗಿ ತಿಳಿವಳಿಕೆ ಹೊಂದುವುದು ಮುಖ್ಯ. ಏಕೆಂದರೆ ವಿದ್ಯಾರ್ಥಿಗಳಿಗೆ ಅರಿವಿಲ್ಲದೆ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಆದರೆ, ಅದು ಅಪರಾಧ ಎಂದು ತಿಳಿದಿರುವುದಿಲ್ಲ. ಕಾನೂನು ತಿಳಿವಳಿಕೆ ಇದ್ದರೆ ಅಪರಾಧಗಳನ್ನು ನಿಗ್ರಹಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬೋಲಾ ಪಂಡಿತ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಸೂರ್ಯ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಹಜವಾಗಿ 16ರಿಂದ 22ನೇ ವಯಸ್ಸಿನ ಯುವಜನರು ಮೋಜಿನ ಜೀವನದ ಭಾಗವಾಗಿ ಮದ್ಯಪಾನ, ಧೂಮಪಾನ, ತಂಬಾಕು ಉತ್ಪನ್ನಗಳ ಸೇವನೆ, ಮಾದಕ ವ್ಯಸನಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ಬಗೆಯ ಚಟುವಟಿಕೆಗಳಿಗೆ ಒಮ್ಮೆ ತೊಡಗಿಕೊಂಡರೆ ಮತ್ತೆ ಸಹಜ ಜೀವನಕ್ಕೆ ಮರಳಲು ಕಷ್ಟ ಸಾಧ್ಯ. ಚಟಕ್ಕೆ ಬಿದ್ದ ಯುವಜನರು ಅನೇಕ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ಕಂಡಿದ್ದೇವೆ. ಇಂತಹವುಗಳನ್ನು ನಿಯಂತ್ರಿಸಲು ಕಾನೂನು ಜ್ಞಾನ ಅಗತ್ಯ ಎಂದು ಹೇಳಿದರು.
ಕಾನೂನು ಅರಿವಿನ ಕೊರತೆಯಿಂದ ಮಾಡುವ ಕೆಲ ಕೃತ್ಯಗಳು ಅಪರಾಧಗಳಾಗಿ ಸಾಬೀತಾದಲ್ಲಿ ಶಿಕ್ಷೆಗೆ ಗುರಿಯಾಗುವ ಅಪಾಯ ಇರುತ್ತದೆ. ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೋ ಕಾಯಿದೆಗೆ ಗುರಿಯಾಗಬೇಕಾಗುತ್ತದೆ. ಜೊತೆಗೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತೊಂದರೆ ಕೊಟ್ಟರೆ ದೌರ್ಜನ್ಯ ಎಸಗಿದರೆ ಅವರು ಸಹ ರ್ಯಾಗಿಂಗ್ ಕಾನೂನಿನಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಾನೂನು ತಿಳುವಳಿಕೆ ಅಗತ್ಯ ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿ ಮಧುಸೂದನ್ ಮಾತನಾಡಿ, ವಿದ್ಯಾರ್ಥಿಗಳು ಅನಾವಶ್ಯಕವಾಗಿ ಮೊಬೈಲ್ ಪೋನ್ ಬಳಸುತ್ತಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುತ್ತದೆ. ಮೊಬೈಲ್ ಪೋನ್ ಬಳಕೆ ಕಡಿಮೆ ಮಾಡುವುದು ಶೈಕ್ಷಣಿಕ ಹಾಗೂ ಮಾನಸಿಕ ಪ್ರಗತಿಗೆ ಪೂರಕ ಎಂದು ಹೇಳಿದರು.
ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಸಂವಿಧಾನ ಮತ್ತು ಕಾನೂನು ನಮ್ಮ ಹೆಮ್ಮೆ. ಡಾ.ಬಿ.ಆರ್.ಅಂಬೇಡ್ಕರ್ ನಮಗೆ ಉತ್ತಮ ಸಂವಿಧಾನ ನೀಡಿದ್ದಾರೆ. ಇದರಿಂದ ತಳಮಟ್ಟದ ಸಮುದಾಯಗಳೂ ಸಾಮಾಜಿಕ ನ್ಯಾಯ, ಸಮಾನತೆ ಪಡೆಯಲು ಸಾಧ್ಯವಾಗಿದೆ. ಯುವಜನತೆ ಕಾನೂನು ಅರಿವು ಪಡೆದುಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. ವ್ಯಾಸಂಗದ ಅವಧಿಯಲ್ಲಿ ಅಧ್ಯಯನಶೀಲರಾಗಿ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸುಜ್ಞಾನ ದೀಪಿಕಾ ಸಂಸ್ಥೆಯ ಮುಖ್ಯಸ್ಥ ಎಂ.ಎಸ್.ಮಂಜುನಾಥ್, ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ರಾಮಮೂರ್ತಿ, ಕೃಷ್ಣ ಪ್ರಸಾದ್, ಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು.
ಕೋಟ್........ಯುವಜನತೆ ರಾಷ್ಟ್ರದ ಸಂಪತ್ತು. ದೇಶಕ್ಕಾಗಿ ಶ್ರಮಿಸಿದ ಮಹನೀಯರ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು. ಅವರ ಆದರ್ಶ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟ್ರಭಕ್ತಿ ಬೆಳೆಸಿಕೊಳ್ಳಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಕಾನೂನು ಅರಿವು ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಬೇಕು.
-ಎಂ.ಸಿ.ಮಂಜುನಾಥ್, ಪ್ರಾಂಶುಪಾಲರುಫೋಟೋ-
20ಕೆಡಿಬಿಪಿ1- ದೊಡ್ಡಬಳ್ಳಾಪುರದ ಸೂರ್ಯ ಪಿಯು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು.