ಅರ್ಥಪೂರ್ಣವಾಗಿ ವಿಶ್ವಮಾನವ ದಿನಾಚರಣೆ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

KannadaprabhaNewsNetwork | Published : Dec 23, 2024 1:02 AM

ಸಾರಾಂಶ

ಕುವೆಂಪು ವಿಶ್ವಚೇತನರಾಗಿದ್ದು, ಅವರನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು.

ರಾಷ್ಟ್ರಕವಿ ಕುವೆಂಪು ಜನ್ಮದಿನ, ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಪೂರ್ವಭಾವಿ ಸಭೆಕನ್ನಡಪ್ರಭ ವಾರ್ತೆ ಕೊಪ್ಪಳ

ಕುವೆಂಪು ವಿಶ್ವಚೇತನರಾಗಿದ್ದು, ಅವರನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಈ ಮಹನೀಯರು ಸಮಾಜದ ಎಲ್ಲರ ಒಳಿತನ್ನೇ ಬಯಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವಮಾನವ ದಿನಾಚರಣೆ ಮತ್ತು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸಂಬಂಧ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಡಿ. 30ರಂದು ವಿಶ್ವಮಾನವ ದಿನಾಚರಣೆಯನ್ನು ಹಾಗೂ 2025ರ ಜನವರಿ 1 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.ವಿಶ್ವಮಾನವ ದಿನಾಚರಣೆ:

ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲಾಗುವ ರಾಷ್ಟ್ರಕವಿ ಕುವೆಂಪುರವರ ಜನ್ಮದಿನ ಡಿ. 29ರಂದು ಭಾನುವಾರ ಬರುವ ಕಾರಣ ಅದರ ಬದಲು ಡಿ. 30ರಂದು ಬೆಳಗ್ಗೆ 10.30ಕ್ಕೆ ನಗರದ ಸಾಹಿತ್ಯ ಭನವದಲ್ಲಿ ಆಚರಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಅಂದು ನಡೆಯುವ ವೇದಿಕೆ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ಭಾವಚಿತ್ರಕ್ಕೆ ಪೂಜೆ ನಂತರ ಕುವೆಂಪು ಅವರ ರಚಿತ ಗೀತೆಗಳಿಗೆ ವಿವಿಧ ಶಾಲಾ ಮಕ್ಕಳಿಂದ ನೃತ್ಯ ರೂಪಕ, ವಿಶೇಷ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಲಿವೆ ಎಂದು ಸಿದ್ರಾಮೇಶ್ವರ ಹೇಳಿದರು.ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ:

ಜನವರಿ 1ರಂದು ಬೆಳಗ್ಗೆ 11 ಗಂಟೆಗೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ವೇದಿಕೆ ಸಮಾರಂಭವನ್ನು ನಗರದ ಸಾಹಿತ್ಯ ಭನವದಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಪೂಜೆ, ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಕುರಿತು ವಿಶೇಷ ಉಪನ್ಯಾಸ ಹಾಗೂ ಇತರ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ವಿಶ್ವಮಾನವ ದಿನಾಚರಣೆ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಕಚೇರಿಗಳಲ್ಲಿ ಆಚರಿಸುವಂತಾಗಬೇಕು. ಸಮಾರಂಭಗಳ ದಿನದಂದು, ಸ್ವಚ್ಛತೆಗೆ ಕ್ರಮ ವಹಿಸಿ. ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ನಾಗರಾಜ್, ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ ಹಾಗೂ ಪುಷ್ಪಲತಾ ಏಳುಬಾವಿ, ಗಣ್ಯರಾದ ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಶಿವಪ್ಪ ಹಡಪದ, ವಿಶ್ವಕರ್ಮ ಸಮುದಾಯದ ಮುಖಂಡರಾದ ಈಶಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ಉಮೇಶ ಪತ್ತಾರ, ಶೇಖರಪ್ಪ ಬಡಿಗೇರ, ದೇವೇಂದ್ರಪ್ಪ ರಾಜೂರು, ಬ್ರಹ್ಮಾನಂದ ಬಡಿಗೇರ ಹಾಗೂ ಮುಂತಾದವರು ಭಾಗವಹಿಸಿದ್ದರು.

Share this article