ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಾತೆಯ ಜನ್ಮದಿನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಆಡಂಬರ ಬಲಿಪೂಜೆ ಹಾಗೂ ನೂತನ ಬತ್ತದ ತೆನೆಗಳನ್ನು ಭಾನುವಾರದಂದು ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ವಿಜಯಕುಮಾರ್ ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಈ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಾತೆ ಮರಿಯಮ್ಮನವರ ಜನ್ಮದಿನದ ಬಲಿಪೂಜೆಯನ್ನು ಸಂತ ಅಂತೋಣಿ ದೇವಾಲಯದಲ್ಲಿ ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು. ನಂತರ ದೇವಾಲಯದಿಂದ ಮಾತೆ ಮರಿಯಮ್ಮನವರ ಮೂರ್ತಿಯನ್ನು ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ಪುಷ್ಪನಮನ ಸಲ್ಲಿಸಲಾಯಿತು.8 ರಂದು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಪೆಸ್ತ್) ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ನಡೆಯುವ 9 ದಿನಗಳ ದಿವ್ಯ ಬಲಿಪೂಜೆ, ಪ್ರಭೋದನೆ ಹಾಗೂ ನೊವೇನಾ ಪ್ರಾರ್ಥನೆ ಪುಷ್ಪಾನಮನಗಳನ್ನು ಸಲ್ಲಿಸಲಾಯಿತು. ಸೆ.8 ರವರೆಗೆ ವಿಶೇಷ ರೀತಿಯಲ್ಲಿ ಜನ್ಮದಿನವನ್ನು ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು.
9 ದಿನಗಳ ನೊವೇನಾ ಪ್ರಾರ್ಥನೆ ಕಾರ್ಯಕ್ರಮಗಳೊಂದಿಗೆ ದಿನ ಸೆ.8 ರಂದು ಹೊಸ ತೆನೆಗಳ ‘ಮೊಂತಿ ಪೆಸ್ತ್’ ಹಬ್ಬವನ್ನು ಎಲ್ಲ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಮನೆ ಮನೆಗಳಲ್ಲಿ ನೂತನವಾಗಿ ನೀಡಲಾದ ಬತ್ತದ ತೆನೆಗಳನ್ನು ತಾವು ತಯಾರಿಸುವ ಭಕ್ಷ ಭೋಜನಗಳೊಂದಿಗೆ ಸೇರಿಸಿ ಸೇವಿಸುವುದು ಈ ಹಬ್ಬದ ಸಂಪ್ರದಾಯವಾಗಿದೆ.
ಇದೇ ಸಂದಭದಲ್ಲಿ 60 ವರ್ಷ ಮೇಲ್ಪಟವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಅವರನ್ನು ಗೌರವಿಸಲಾಯಿತು.
ಮಾದಾಪುರ ಸಮೀಪದ ಪವಿತ್ರ ಕುಟುಂಬದ ದೇವಾಲಯದಲ್ಲೂ ಕನ್ಯಾಮಾತೆ ಮರಿಯಮ್ಮನವರ ಜನ್ಮ ದಿನೋತ್ಸವದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಆಡಂಬರ ಬಲಿಪೂಜೆಯನ್ನು ರೇ.ಪಾ.ಸೂಸೈ ರವರು ನೆರವೇರಿಸಿದರು. ನಂತರ ಕ್ರೈಸ್ತ ಬಾಂದವರು ಮನೆ ಮನೆಗಳಿಂದ ಒಗ್ಗೂಡಿಸಿ ತಂದಿದ ಬಗೆ ಬಗೆಯ ಪುಷ್ಪಗಳನ್ನು ಎಲ್ಲಾರೂ ಕನ್ಯಾಮಾತೆ ಮಯರಿಮ್ಮನವರಿಗೆ ಸಮರ್ಪಿಸಿದರು.