ವಿಜಯನಗರ ಜಿಲ್ಲಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

KannadaprabhaNewsNetwork | Published : Jun 18, 2024 12:48 AM

ಸಾರಾಂಶ

ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿದಂತೆ ಆರು ತಾಲೂಕುಗಳಲ್ಲಿ ಬಕ್ರಿದ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಹೊಸಪೇಟೆ: ವಿಜಯನಗರ ಜಿಲ್ಲಾದ್ಯಾಂತ ಬಕ್ರಿದ್ ಹಬ್ಬವನ್ನು ಮುಸ್ಲಿಮರು ಶ್ರದ್ಧಾ-ಭಕ್ತಿಯಿಂದ ಸೋಮವಾರ ಆಚರಿಸಿದರು.ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿದಂತೆ ಆರು ತಾಲೂಕುಗಳಲ್ಲಿ ಬಕ್ರಿದ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನ, ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಮುಸ್ಲಿಮರು ಆರ್‌ಟಿಒ ಕಚೇರಿ ಈದ್ಗಾ ಮೈದಾನ, ೮.೩೦ಕ್ಕೆ ಚಿತ್ತವಾಡ್ಗಿ ಈದ್ಗಾ ಮೈದಾನ, ಟಿ.ಬಿ. ಡ್ಯಾಂ ಈದ್ಗಾ ಮೈದಾನ. ಗುಲಾಬ್ ಶಾ ವಲಿ ದರ್ಗಾದ ಈದ್ಗಾ ಮೈದಾನ, ಬಳ್ಳಾರಿ ರಸ್ತೆಯ ಈದ್ಗಾ ಮೈದಾನ ಕಾರಿಗನೂರು ಈದ್ಗಾ ಮೈದಾನ, ನಾಗೇನಹಳ್ಳಿ ಗ್ರಾಮದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹುಡಾ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ, ನಗರದ ಗುಲಾಬ್ ಶಾ ವಲಿ ದರ್ಗಾದ ಈದ್ಗಾ ಮೈದಾನದಲ್ಲಿ, ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ತ್ಯಾಗ, ಬಲಿದಾನದ ಪ್ರತೀಕ ಬಕ್ರಿದ್ ಹಬ್ಬವನ್ನು ವಿಜಯನಗರ ಜಿಲ್ಲೆಯಲ್ಲಿ ಮುಸ್ಲಿಮರು ಸೌಹಾರ್ದದಿಂದ ಆಚರಿಸಿ, ನಾಡಿನ ಸಮದ್ಧಿಗಾಗಿ ಮಳೆ-ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದರು.

ಕುರ್ಬಾನಿ ಎಂದರೆ ತ್ಯಾಗದ ಪ್ರತೀಕವಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ತೊಡೆದು ಹಾಕಿ, ಪರಸ್ಪರ ಒಬ್ಬರಿಗೊಬ್ಬರೂ ಸಹೋದರತ್ವ ಭಾವನೆಯಿಂದ ಬಾಳಬೇಕು ಎಂಬುದು ಪ್ರವಾದಿ ಮುಹಮ್ಮದರ ಸಂದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾದಿಗಳ ತತ್ವ-ಆದರ್ಶಗಳನ್ನು ಮುಸ್ಲಿಮರು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಕಾಪಾಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಎಂ.ಫಿರೋಜ್ ಖಾನ್, ಎಂ.ಡಿ. ಅಬೂಬಕ್ಕರ್, ಜಿ.ಅನ್ಸರ್ ಭಾಷಾ, ಡಾ.ಎಂ.ಡಿ. ದುರ್ವೇಶ್ ಮೈನುದ್ದಿನ್, ಕೊತ್ವಾಲ್ ಮುಹಮ್ಮದ್ ಮೋಸಿನ್ ಅಡ್ವೋಕೇಟ್ ಸದ್ದಾಮ್, ಎಲ್. ಗುಲಾಮ್ ರಸೂಲ್ ಅಬ್ದುಲ್ ಖಾದರ್ ರಫಾಯಿ ಖದೀರ್, ಜಫ್ರುಲ್ಲಾ ಖಾನ್‌ಸಾಬ್, ರಜಾಕ್ ಹಾಗೂ ಸಾವಿರಾರು ಮುಸ್ಲಿಮರು ಭಾಗವಹಿಸಿದ್ದರು.

ಬಕ್ರೀದ್ ಹಬ್ಬದ ನಿಮಿತ್ತ ಬಿಜೆಪಿ ಯುವ ಮುಖಂಡ ಸಿದ್ಧಾರ್ಥ್ ಸಿಂಗ್ ನಗರದ ಗುಲಾಬ್ ಶಾ ವಲೀ ದರ್ಗಾದ ಈದ್ಗಾ ಮೈದಾನಕ್ಕೆ ಆಗಮಿಸಿ, ಮುಸ್ಲಿಂ ಬಾಂಧವರೊಟ್ಟಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Share this article