ಬಸವ ಪಂಚಮಿ ಹೆಸರಿನಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಹಲವು ಸಂಘಟನೆಯ ಮುಖಂಡರು ಅರಿವು ಮೂಡಿಸುತ್ತಿರುವುದು ಸಾರ್ಥಕ ಕೆಲಸವಾಗಿದೆ.
ಹಗರಿಬೊಮ್ಮನಹಳ್ಳಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ನೀಡುವ ಮೂಲಕ ಮಾನವ ಬಂಧುತ್ವ ಹಾಗೂ ವಿವಿಧ ಪ್ರಗತಿಪರ ಸಂಘಟನೆಯವರು, ಬಸವಣ್ಣನವರ ತತ್ವಾದರ್ಶಗಳನ್ನು ಉಳಿಸುವ ನಿಟ್ಟಿನಲ್ಲಿ ಬಸವ ಪಂಚಮಿಯನ್ನು ಪಟ್ಟಣದಲ್ಲಿ ಅತ್ಯಂತ ವೈಚಾರಿಕವಾಗಿ ಆಚರಿಸಿದರು.
ಈ ಕುರಿತು ಪ್ರಗತಿಪರ ಚಿಂತಕ ಉಪನ್ಯಾಸಕ ಅಕ್ಕಿ ಬಸವೇಶ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ! ಉಂಬ ಜಂಗಮ ಬಂದರೆ ನಡೆ ಎಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ! ನಮ್ಮ ಕೂಡಲಸಂಗನ ಶರಣರ ಕಂಡು ಊದಾಸೀನವ ಮಾಡಿದಡೆ ಕಲ್ಲ ತಾಗಿದ ಮಿಟಿಯಂತಪ್ಪರಯ್ಯಾ ಎಂದು ಹನ್ನೆರಡನೆಯ ಶತಮಾನದಲ್ಲಿಯೇ ತಮ್ಮ ವಚನದಲ್ಲಿ ಇಂತಹ ಮೌಢ್ಯವನ್ನು ಖಂಡಿಸಿದ್ದಾರೆ. ಹಬ್ಬದಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಮಣ್ಣಿನ ಹುತ್ತಗಳಿಗೆ ಮತ್ತು ಕಲ್ಲುಗಳಿಗೆ ಸುರಿದು ವ್ಯರ್ಥ ಮಾಡುವುದು ನೋವಿನ ಸಂಗತಿಯಾಗಿದೆ. ರೈತರು ಅತ್ಯಂತ ಶ್ರಮವಹಿಸಿ ಉತ್ಪಾದನೆ ಮಾಡಿದ ಉತ್ಕೃಷ್ಟ ಪೋಷಕಾಂಶಭರಿತ ಹಾಲನ್ನು ಹುತ್ತ, ಕಲ್ಲಿಗೆ ಸುರಿದು ಪೋಲು ಮಾಡದೇ ನಾವು ಕುಡಿಯುವುದರ ಜೊತೆಗೆ ಅವಶ್ಯಕತೆ ಇರುವ ಮಕ್ಕಳು ಹಾಗೂ ರೋಗಿಗಳಿಗೆ ಕುಡಿಯಲು ಕೊಡಬೇಕು. ಇದರಿಂದ ಹಾಲು ಉತ್ಪಾದನೆ ಮಾಡಿದ ರೈತ, ಕಾರ್ಮಿಕರ ಶ್ರಮ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರು ಮೌಢ್ಯ, ಕಂದಾಚಾರ ಬಿಟ್ಟು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಸವ ಪಂಚಮಿ ಹೆಸರಿನಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಹಲವು ಸಂಘಟನೆಯ ಮುಖಂಡರು ಅರಿವು ಮೂಡಿಸುತ್ತಿರುವುದು ಸಾರ್ಥಕ ಕೆಲಸವಾಗಿದೆ ಎಂದರು.
ಪರಿಸರಪ್ರೇಮಿ ಗಣೇಶರಾವ್ ಹವಾಲ್ದಾರ್ ಮಾತನಾಡಿ, ಹುತ್ತಕ್ಕೆ ಹಾಲೆರೆಯುವುದನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು. ಹಾಲು ಹಾವುಗಳ ದೇಹಕ್ಕೆ ಅಂಟಿಕೊಂಡರೆ ಇರುವೆ ಹಾಗೂ ಹುಳು ಹುಪ್ಪಟೆ ಅದನ್ನು ಸಾಯಿಸಿ ತಿನ್ನುತ್ತವೆ. ಹಾವು ಹಾಲು ಕುಡಿದರೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ. ಸರಳ ಸತ್ಯವನ್ನು ಮರೆಮಾಚಿ ಧಾರ್ಮಿಕ ಆಚರಣೆಯ ನೆಪದಲ್ಲಿ ಹುತ್ತಕ್ಕೆ ಹಾಲೆರೆಯುವುದು ಮೌಢ್ಯವಾಗಿದೆ. ಸತ್ಯ ವಿಚಾರವನ್ನು ಜನರಿಗೆ ತಿಳಿಸಿ, ವೈಜ್ಞಾನಿಕ ಮನೋಭಾವ ಬಿತ್ತುವ ಅಗತ್ಯವಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.