ಕನ್ನಡಪ್ರಭ ವಾರ್ತೆ ಮಡಿಕೇರಿ
ಓಣಂ ಅದ್ಬುತ ಐತಿಹ್ಯ, ಸಂಪ್ರದಾಯ ಹೊಂದಿರುವ ಹಬ್ಬ. ಸಾರ್ವಜನಿಕವಾಗಿ ಹಬ್ಬ ಆಚರಣೆ ಮೂಲಕ ಜನಾಂಗವನ್ನು ಒಗ್ಗೂಡಿಸುವ ಕೆಲಸವಾಗುತ್ತಿದೆ. ಎಲ್ಲಿದ್ದರೂ ಸಂಸ್ಕೃತಿ, ಸಂಪ್ರದಾಯ ಮರೆಯಬಾರದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದ್ದಾರೆ.ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ಹಿಂದೂ ಮಲಯಾಳಿ ಸಮಾಜ ಮಡಿಕೇರಿ ಘಟಕದ ವತಿಯಿಂದ ಆಯೋಜಿಸಿದ್ದ ಓಣಾಘೋಷಂ ಹಾಗೂ ಓಣಂ ಸದ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವಿರುವ ನಾಡು-ನುಡಿಗೂ ಗೌರವ ನೀಡಬೇಕು. ಎಲ್ಲ ಜನಾಂಗದಲ್ಲಿಯೂ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರಿರುತ್ತಾರೆ. ಅವರನ್ನು ಮೇಲೆತ್ತುವ ಕೆಲಸ ಸಂಘಟನೆಯಿಂದಾಗಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ , ಹಿಂದೂ ಸಮಾಜದಲ್ಲಿ ವಿವಿಧ ಆಚಾರ-ವಿಚಾರ, ಪದ್ಧತಿಗಳಿವೆ. ಆದರೆ, ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ನಾವೆಲ್ಲ ಬಂಧು-ನಾವೆಲ್ಲ ಹಿಂದೂ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು ಎಂದರು.
ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು. ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಬೇಕು. ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಮಲಯಾಳಿ ಸಂಘ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಯುವಜನತೆಗೆ ಸಂಸ್ಕೃತಿ, ಸಂಪ್ರದಾಯ ಕಲಿಸಿ, ಉಳಿಸುವ ಕೆಲಸವಾಗಬೇಕು ಎಂದರು.
ಹಿಂದೂ ಮಲಯಾಳಿ ಸಮಾಜ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಮಲಯಾಳಿಗರು ಭಯಪಡುವ ಪರಿಸ್ಥಿತಿ ಹಲವು ವರ್ಷಗಳ ಹಿಂದಿತ್ತು. ಆದರೆ, ಇಂದು ಸಮಾಜದ ಮುಖ್ಯವಾಹಿನಿಗೆ ಬಂದು ಧೈರ್ಯದಿಂದ ಬದುಕು ಸಾಗಿಸುವ ಹಂತಕ್ಕೆ ತಲುಪಿದ್ದೇವೆ ಎಂದರು.ಕುಲಕಸಬು, ಕರಕುಶಲ, ನಾವು ಮಾಡುತ್ತಿರುವ ಕೆಲಸವನ್ನೂ ಮಕ್ಕಳಿಗೆ ಕಲಿಸಬೇಕು. ಇದರಿಂದ ಮಕ್ಕಳಲ್ಲಿ ಸ್ವಾಭಿಮಾನ ಮೂಡಿ ಧೈರ್ಯದಿಂದ ಸಮಾಜದಲ್ಲಿ ಬದುಕುತ್ತಾರೆ. ಸಮಾಜ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆ ಮಕ್ಕಳ ಮೇಲೆ ನಿಗಾವಹಿಸಬೇಕು. ತಪ್ಪು ದಾರಿ ಹಿಡಿಯದಂತೆ ಎಚ್ಚರವಹಿಸಬೇಕು ಎಂದು ಕರೆ ನೀಡಿದರು.
ನಗರಸಭಾ ಮಾಜಿ ಸದಸ್ಯ ಕೆ.ಎಂ.ಬಿ. ಗಣೇಶ್ ಮಾತನಾಡಿ, ರಾಜಕೀಯ ಮಧ್ಯ ಪ್ರವೇಶದಿಂದ ಸಂಘಟನೆಗಳು ಹಾಳಾದ ಉದಾಹರಣೆಯಿದೆ. ಆದರೆ, ಮಲಯಾಳಿ ಸಂಘ ವ್ಯವಸ್ಥಿತ ಹಾಗೂ ಉತ್ತಮ ಗುರಿಯೊಂದಿಗೆ ಸಾಗುತ್ತಿದೆ ಎಂದರು.ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್.ವಾಸುದೇವ್ ಮಾತನಾಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎನ್.ಆರ್. ಸ್ನೇಹಾ, ಕೆ.ಎ. ಅಪೇಕ್ಷಾ, ಕೆ.ಎಸ್.ಬಿನೀಶ್, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ದೀಕ್ಷಾ, ಎ.ಎಸ್. ಸಂಚಿತ್ ಅವರನ್ನು ಸನ್ಮಾನಿಸಲಾಯಿತು.ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಡಿ.ಎಚ್.ಗಣೇಶ್, ಹಿಂದೂ ಮಲಯಾಳಿ ಸಮಾಜ ಸ್ಥಾಪಕಾಧ್ಯಕ್ಷ ಕೆ.ಎಸ್.ರಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ದಿನೇಶ್ ನಾಯರ್, ಖಜಾಂಜಿ ಎಂ.ಪಿ.ರವಿ, ನಾಪೋಕ್ಲು ಘಟಕ ಅಧ್ಯಕ್ಷ ಕೆ.ಕೆ. ಅನಿಲ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜನ್, ಯುವ ಘಟಕ ಅಧ್ಯಕ್ಷ ಆರ್. ಅರವಿಂದ್ ಸೇರಿದಂತೆ ವಿವಿಧೆಡೆ ಮಲಯಾಳಿ ಸಂಘದ ಅಧ್ಯಕ್ಷರು ಹಾಜರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಧ್ವಜವನ್ನು ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ನಿವೃತ್ತ ಪೊಲೀಸ್ ಅಧಿಕಾರಿ, ರಾಷ್ಟ್ರಪತಿ ಪದಕ ಪುರಸ್ಕೃತ ಎಂ. ಅಚ್ಚುತ್ತ ನಾಯರ್ ರಾಷ್ಟ್ರ ಧ್ವಜಾರೋಹಣ ಮಾಡಿದರು.ತಿರುವದರ ನೃತ್ಯದ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ದೀಪ್ತಿ ಧರ್ಮೇಂದ್ರ ಪ್ರಾರ್ಥಿಸಿ, ಟಿ.ಕೆ. ಸುದೀರ್ ಸ್ವಾಗತಿಸಿ, ಅನು ಅನೀಶ್ ವಂದಿಸಿದರು.
ಮಲಯಾಳಿ ಸಮಾಜದ ಸಂಸ್ಕೃತಿ, ಸಂಪ್ರದಾಯದ ಅನಾವರಣದೊಂದಿಗೆ ಕೇರಳದ ಸಾಂಪ್ರದಾಯಿಕ ನೃತ್ಯಗಳು, ಹಾಡು ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡವು. ಓಣಂ ಹಬ್ಬದ ವಿಶೇಷ ಆಕರ್ಷಣೆಯಾದ ಓಣಂ ಸದ್ಯವನ್ನು ಜನರು ಸವಿದರು.