ಹಾವೇರಿ: `ಹಾವೇರಿ ರಾಕ್‌ಸ್ಟಾರ್’ `ಅನ್ನದಾತ’, ‘ಜನನಾಯಕ’, ‘ಘಟಸರ್ಪ’, `ಇತಿಹಾಸಕಾರ’, ‘ಮಿಡಿನಾಗರ’ ಸೇರಿದಂತೆ ಹತ್ತು ಹಲವು ಘಟಾನುಘಟಿಗಳು ಗತ್ತು ಗಮ್ಮತ್ತಿನೊಂದಿಗೆ ಆಖಾಡಕ್ಕೆ ಇಳಿದಿದ್ದವು. ಇವರನ್ನು ನೋಡಲೆಂದೇ ಸಾವಿರಾರು ಜನರು ಜಮಾಯಿಸಿದ್ದರು. ಅಖಾಡದಲ್ಲಿ ಇವರ ಓಟ ನೋಡುಗರನ್ನು ರೋಮಾಂಚನಗೊಳಿಸಿತು.
ಇದು ನಗರದ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಹಾಗೂ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಬಲಿಪಾಡ್ಯದ ದಿನವಾದ ಶನಿವಾರ ಆಯೋಜಿಸಿದ್ದ ಈ ವರ್ಷದ ಮೊದಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ.
ಬೆಳಗ್ಗೆಯಿಂದಲೇ ಆರಂಭಗೊಂಡ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಕರ್ನಾಟಕ ರತ್ನ, ಪವರ್, ಕದಂಬ, ಬಲೆಟ್, ನಾಗರಹಾವು, ರಾಕಿಬಾಯ್, ಹಾವೇರಿ ಡಾನ್, ಟೈಗರ್, ರೆಬಲ್‌ಸ್ಟಾರ್, ಸಾಹಸಸಿಂಹ, ಡಾ.ರಾಜ್, ಚಾಮುಂಡಿ ಎಕ್ಸ್‌ಪ್ರೆಸ್, ಆ್ಯಂಬುಲೆನ್ಸ್, ಕರ್ನಾಟಕ ಎಕ್ಸಪ್ರೆಸ್ ಹಾವೇರಿ ಕಾ ರಾಜಾ, ಹಾವೇರಿ ಕಾ ಸ್ಟಾರ್, ಸೂಪರ್, ಡಿಂಗ್, ಬಹದ್ದೂರ, ಕರ್ನಾಟಕದ ಹುಲಿ, ಹಾವೇರಿ ಹುಲಿ, ಸುರಂಗ, ಘಟಸರ್ಪ ಸೇರಿದಂತೆ ಹಲವಾರು ನಾಮದಿಂದ ಕರೆಯಲ್ಪಡುತ್ತಿದ್ದ ಈ ಹೋರಿಗಳನ್ನು ಅದರ ಮಾಲೀಕರು ಕೊಬ್ಬರಿ ಹರಿಯುವ ಯುವಕರ ಕೈಗೆ ಸಿಗದಂತೆ ಓಡಿಸುತ್ತಿದ್ದರು. ಇನ್ನೊಂದೆಡೆ ಕೊಬ್ಬರಿ ಹರಿಯಲು ಯುವಕರು ಹರಸಾಹಸ ಪಡುತ್ತಿದ್ದ ದೃಶ್ಯ ನೋಡಲು ರೋಮಾಂಚನಕಾರಿಯಾಗಿತ್ತು.ಸ್ಪರ್ಧೆಗಿಳಿಸಲು ತಂದಿರುವ ಹೋರಿಗಳ ಕೊರಳಲ್ಲಿ 10-20 ಕೆಜಿಯವರೆಗೂ ಒಣಕೊಬ್ಬರಿಯ ಹಾರಗಳನ್ನು ಹಾಕಲಾಗಿತ್ತು. ಕೊರಳಲ್ಲಿರುವ ಈ ಕೊಬ್ಬರಿ ಹಾರವನ್ನು ಸಾಹಸಮಯವಾಗಿ ಕಿತ್ತುಕೊಂಡರೇ ಆ ಹೋರಿಯನ್ನು ಆ ಯುವಕ ಬೆದರಿಸಿದಂತೆ. ವಿಶಿಷ್ಟವಾಗಿ ಅದ್ಧೂರಿಯಾಗಿ ಅಲಂಕೃತ, ಕೆಜಿಗಟ್ಟಲೇ ಒಣಕೊಬ್ಬರಿ ಹಾರ ಹಾಕಿಕೊಂಡಿರುವ ಹೋರಿ, ಯಾರ ಕೈಗೂ ಸಿಗದೇ ಛಂಗನೇ ಜಿಗಿದು... ಸರ‍್ರನೇ ಓಡಿದಾಗ ಅದರ ಮಾಲೀಕ ರೈತನಿಗಾಗುವ ಸಂತಸ ಅಷ್ಟಿಷ್ಟಲ್ಲ. ಶೌರ್ಯದ ಪ್ರತೀಕವಾಗಿ ಬೆದರಿಸುವ ಕೊಬ್ಬರಿ ಹೋರಿ ಸ್ಪರ್ಧೆ ಅಷ್ಟೆ ಅಪಾಯಕಾರಿ ಆಟವೂ ಆಗಿದೆ. ಆದರೂ ದೀಪಾವಳಿ ಪಾಡ್ಯದಿಂದ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಯಾವುದೇ ಅಡೆತಡೆಯಿಲ್ಲದೇ ಸಂಭ್ರಮದಿಂದ ನಡೆಯಿತು.
ಹೋರಿ ಓಡಿಸುವಾಗ ಕಾಲು ಜಾರದಿರಲಿ ಎಂದು ಡಾಂಬರ್ ರಸ್ತೆ ಮೇಲೆ ಮಣ್ಣನ್ನು ಹಾಕಿ ಅಖಾಡ ಸಿದ್ಧಗೊಳಿಸಲಾಗಿತ್ತು. ಸ್ಪರ್ಧೆ ನಡೆಯುವ ರಸ್ತೆ ಇಕ್ಕೆಲಗಳಲ್ಲಿ ಓಡುವ ಹೋರಿಗಳಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಹಾಗೂ ಜನರಿಗೆ ವೀಕ್ಷಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಟ್ಟಿಗೆ ತಡೆಗೋಡೆ ನಿರ್ಮಿಸಲಾಗಿತ್ತು. ಹೋರಿ ಬೆದರಿಸುವ ಕಾರ್ಯಕ್ರಮ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಹೋರಿ ಬೆದರಿಸುವ ಸ್ಪರ್ಧೆ ಆರಂಭ: ನಗರದಲ್ಲಿ ವೀರಭದ್ರೇಶ್ವರ ದೇಗುಲದ ಎದುರು ಆರಂಭವಾದ ಈ ಹೋರಿ ಬೆದರಿಸುವ ಸ್ಪರ್ಧೆ ಎರಡು ತಿಂಗಳುಗಳ ಕಾಲ ಜಿಲ್ಲೆಯಾದ್ಯಂತ ಈ ಜಾನಪದ ಕ್ರೀಡೆಯಾಗಿ ನಿರಂತರವಾಗಿ ನಡೆಯುತ್ತದೆ. ಬಲಿಪಾಡ್ಯದ ದಿನದಂದು ಆರಂಭವಾದ ಸ್ಪರ್ಧೆ ಜಿಲ್ಲೆಯ ವಿವಿಧ ಭಾಗದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಗಳು ಕೆಲವು ಗ್ರಾಮಗಳಲ್ಲಿ ಆಯೋಜಿಸಲಾಗುತ್ತದೆ. ಬಂಗಾರ, ಬೆಳ್ಳಿ, ಬೈಕ್ ಸೇರಿದಂತೆ ನಾನಾ ಬಹುಮಾನಗಳನ್ನು ಸ್ಪರ್ಧೆಯಲ್ಲಿ ವಿಜೇತರಿಗೆ ನೀಡಲಾಗುತ್ತದೆ.