ಬೆಂಗಳೂರು : ಶಿವಮೊಗ್ಗದ ಐಸಿಸ್ ಭಯೋತ್ಪಾದನಾ ಪಿತೂರಿ ಪ್ರಕರಣದ 10ನೇ ಆರೋಪಿಯಾಗಿದ್ದ ಐಸಿಸ್ ಉಗ್ರ ಸಂಘಟನೆ ಸದಸ್ಯ ಅರಾಫತ್ ಅಲಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಿಶೇಷ ನ್ಯಾಯಾಲಯ 6 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 47 ಸಾವಿರ ರು. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯವು 2025ರ ನವೆಂಬರ್‌ನಲ್ಲಿ ಇಬ್ಬರು ಅಪರಾಧಿಗಳಿಗೆ ಆರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಮೂರನೇ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ. ಶಿವಮೊಗ್ಗದ ಐಸಿಸ್ ಭಯೋತ್ಪಾದನಾ ಪಿತೂರಿ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು 12 ಮಂದಿ ವಿರುದ್ಧ ಐಪಿಸಿ ವಿವಿಧ ಸೆಕ್ಷನ್ ಯುಎಪಿಎ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ ಅರಾಫತ್ ಅಲಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಇದೀಗ 6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 47 ಸಾವಿರ ರು. ದಂಡ ವಿಧಿಸಿದೆ.
ಪ್ರಕರಣದ ಹಿನ್ನೆಲೆ:
2022ರ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ವೀರ್ ಸಾವರ್ಕರ್ ಬ್ಯಾನರ್ ಹಾಕುವಾಗ ನಡೆದ ಜಗಳದ ವೇಳೆ ದುಷ್ಕರ್ಮಿಗಳು ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದರು. ಈ ಸಂಬಂಧ ಜಬೀವುಲ್ಲಾ, ತನ್ವೀರ್ ಅಹಮ್ಮದ್, ನದೀಮ್ ಫೈಜಲ್ ಸೇರಿ ಕೆಲವರನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಶಂಕಿತ ಉಗ್ರರ ಬಗ್ಗೆ ಮಾಹಿತಿ ಸಿಕ್ಕಿತ್ತು.
ತುಂಗಾ ನದಿ ತಟದಲ್ಲಿ ಬಾಂಬ್ ಬ್ಲಾಸ್ಟ್:
ಆರೋಪಿ ಜಬೀವುಲ್ಲಾಗೆ ತೀರ್ಥಹಳ್ಳಿಯ ಶಾರೀಕ್ ಗಲಾಟೆ ಎಬ್ಬಿಸಲು ಪ್ರಚೋದನೆ ನೀಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಮುಂದುವರೆದ ತನಿಖೆಯಲ್ಲಿ ಶಿವಮೊಗ್ಗದ ಸೈಯ್ಯದ್ ಯಾಸೀನ್, ಮಂಗಳೂರಿನ ನಿವಾಸಿ ಮಾಝ್ ಹಾಗೂ ತೀರ್ಥಹಳ್ಳಿಯ ಶಾರೀಕ್ ಸೇರಿಕೊಂಡು ಬಾಂಬ್ ತಯಾರಿಸಿ ತುಂಗಾ ನದಿಯ ತಟದಲ್ಲಿ ಪ್ರಾಯೋಗಿಕವಾಗಿ ಸ್ಫೋಟಿಸಿರುವುದು ಮತ್ತು ತ್ರಿವರ್ಣ ಧ್ವಜ ಸುಟ್ಟಿರುವ ವಿಚಾರವೂ ಬಯಲಾಗಿತ್ತು.
ಈ ಸಂಬಂಧ ಎನ್‌ಐಎ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಆರೋಪಿಗಳು ರಾಜ್ಯದಲ್ಲಿ ಐಸಿಸ್ ಉಗ್ರ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ವಿಧ್ವಂಸಕ ಕೃತ್ಯಗಳು, ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಎನ್‌ಐಎ ಅಧಿಕಾರಿಗಳು ಒಬ್ಬೊಬ್ಬರೇ ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಶಾರಿಕ್‌ಗೂ ಅರಾಫತ್ ಅಲಿಗೂ ನಂಟಿರುವುದು ತನಿಖೆಯಲ್ಲಿ ಬಯಲಾಗಿತ್ತು.
ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧನ:
ಐಸಿಸ್ ಉಗ್ರ ಸಂಘಟನೆಗೆ ಸೇರಿದ್ದ ತೀರ್ಥಹಳ್ಳಿಯ ಅರಾಫತ್ ಅಲಿ ಬಂಧನ ಭೀತಿಯಿಂದ 2020ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2023ರ ಸೆ.14ರಂದು ಕೀನ್ಯಾದ ನೈರೋಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅರಾಫತ್ ಅಲಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ನಿಷೇಧಿತ ಐಸಿಸ್ ಉ್ರಗ ಸಂಘಟನೆ ಸದಸ್ಯನಾಗಿದ್ದ ಅರಾಫತ್ ಅಲಿ ಭಾರತದ ನೆಲದಲ್ಲಿ ಹಿಂಸಾತ್ಮಕ ಭಯೋತ್ಪಾದಕ ಸಿದ್ಧಾಂತ ಪ್ರಚಾರ ಮಾಡುವ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದ. ಶಿವಮೊಗ್ಗ ಐಸಿಸ್ ಭಯೋತ್ಪಾದನಾ ಘಟಕಕ್ಕೆ ಯುವಕರನ್ನು ಸೆಳೆದು ಇಸ್ಲಾಂ ಮೂಲಭೂತವಾದ ಭೋದಿಸುತ್ತಿದ್ದ. ಐಸಿಸ್ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ಬಯಲಾಗಿತ್ತು.
ಉಗ್ರ ಸಂಘಟನೆಗಳಿಗೆ ಬೆಂಬಲ:
ಐಸಿಸ್ ಮತ್ತು ಲಷ್ಕರ್-ಎ-ತೊಯ್ಬಾ ಸೇರಿ ಇತರ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಸಲುವಾಗಿ ಮಂಗಳೂರು ನಗರದಲ್ಲಿ ಪ್ರಚೋದನಾಕಾರಿ ಗೀಚುಬರಹಗಳನ್ನು ಕೆತ್ತಲು ಇತರೆ ಆರೋಪಿಗಳಿಗೆ ಪ್ರಚೋದನೆ ಮತ್ತು ಪ್ರೇರೇಪಿಸಿದ್ದ. ವಿವಿಧ ಧರ್ಮಗಳ ಜನರಲ್ಲಿ ದ್ವೇಷ ಬಿತ್ತುವುದು, ಸಮಾಜದ ಶಾಂತಿ ಕದಡುವ ಗುರಿ ಹೊಂದಿದ್ದರು. ಅರಾಫತ್ ಅಲಿ ಐಸಿಸ್ ಆನ್‌ಲೈನ್ ಹ್ಯಾಂಡ್ಲರ್ ಜೊತೆ ಸಂಪರ್ಕದಲ್ಲಿದ್ದ. ಶಿವಮೊಗ್ಗ ಭಯೋತ್ಪಾದನಾ ಘಟಕಕ್ಕೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ಒದಗಿಸುತ್ತಿದ್ದ ವಿಚಾರ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
