ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಾಂಗ್ರೆಸ್ ಆಡಳಿತ ಇರುವ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಹಾಲಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ವಿರುದ್ದ ಅಸಮಾಧಾನಗೊಂಡಿರುವ ಕಾಂಗ್ರೆಸ್ಸಿನ 6 ಮಂದಿ ಸದಸ್ಯರು ಅವಿಶ್ವಾಸ ಗೊತ್ತುವಳಿ ಸಭೆ ಕರೆಯುವಂತೆ ಆಗ್ರಹಿಸಿ ಸೋಮವಾರ ಪಪಂ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಅಧ್ಯಕ್ಷರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ಸಿನ ಸುಶೀಲಾಶೆಟ್ಟಿ ಮತ್ತು ನಮೃತ್ ಈ ಪತ್ರಕ್ಕೆ ಸಹಿ ಮಾಡಿಲ್ಲ.ಪಪಂ ಅಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಸದಸ್ಯರ ನಡುವಿನ ಅಸಮಾಧಾನದ ಹಿನ್ನೆಲೆಯಲ್ಲಿ ಉಧ್ಭವವಾಗಿದ್ದ ಬೆಳವಣಿಗೆ ತಾರಕಕ್ಕೇರಿತ್ತು. ಇದೇ ವಿಷಯಕ್ಕೆ ಸಂಭಂದಿಸಿ ಭಾನುವಾರ ಪಟ್ಟಣದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಉಪಸ್ಥಿತಿಯಲ್ಲಿ ನಡೆದ ಪಕ್ಷದ ಸಭೆಯ ತೀರ್ಮಾನದಂತೆ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ತೀರ್ಮಾನಿಸಲಾಗಿತ್ತು ಎನ್ನಲಾಗಿದೆ.
ಭಾನುವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ವಕ್ತಾರರಾದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸಹ ಉಪಸ್ಥಿತರಿದ್ದರು. ಈ ಸಭೆಗೆ ರಹಮತ್ ಉಲ್ಲಾ ಅಸಾದಿ ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಸುಶೀಲಾಶೆಟ್ಟಿ ಮತ್ತು ನಮೃತ್ ಸಭೆಗೆ ಹಾಜರಾಗಿರಲಿಲ್ಲ.ಅಧಿಕಾರ ಹಂಚಿಕೆಯ ಸೂತ್ರ ಮತ್ತು ಪಕ್ಷದ ತೀರ್ಮಾನದಂತೆ ರಹಮತ್ ಉಲ್ಲಾ ಅಸಾದಿ ಕಳೆದ ಮೇ ತಿಂಗಳಲ್ಲಿ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರಿಸಲು ರಾಜೀನಾಮೆ ನೀಡಬೇಕಿತ್ತು. ಪಟ್ಟಣದ ಕೆಲವೊಂದು ಪ್ರಮುಖ ಅಭಿವೃದ್ದಿ ಕೆಲಸಗಳು ಅಪೂರ್ಣಗೊಂಡಿರುವುದರಿಂದ ತನಗೆ ಹೆಚ್ಚು ಕಾಲಾವಕಾಶ ನೀಡುವಂತೆಯೂ ರಹಮತ್ ಉಲ್ಲಾ ಅಸಾದಿ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದು, ಮಾತ್ರವಲ್ಲದೇ ಅಲ್ಲಿಯವರೆಗೆ ರಾಜೀನಾಮೆ ನೀಡುವುದಿಲ್ಲ ಎಂದೂ ಖಡಕ್ಕಾಗಿ ಪಕ್ಷದ ಮುಖಂಡರಿಗೆ ತಿಳಿಸಿದ್ದರು ಎಂದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸದಸ್ಯರು ಅಸಮಾಧಾನಗೊಂಡಿದ್ದು ಪಕ್ಷದೊಳಗೆ ಕುದಿಯುತ್ತಿದ್ದ ಅಸಮಾಧಾನ ಸ್ಫೋಟಗೊಂಡಿರುವುದು ಸೋಮವಾರದ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. 2021ರಲ್ಲಿ ಅಧಿಕಾರಕ್ಕೆ ಬಂದ 30 ತಿಂಗಳ ಅವಧಿಯಲ್ಲಿ ಕಾಂಗ್ರೆಸ್ಸಿನ ಶಬನಂ, ಸುಶೀಲಾಶೆಟ್ಟಿ ಹಾಗೂ ಗೀತಾ ರಮೇಶ್ ಈ ಮೂವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪಪಂಯ ಎರಡನೇ ಅವಧಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರಹಮತ್ ಉಲ್ಲಾ ಅಸಾದಿ ತಾವೇ ಒಪ್ಪಿರುವಂತೆ 8 ತಿಂಗಳ ನಂತರ ಇನ್ನೂ ಇಬ್ಬರಿಗೆ ಅವಕಾಶವಾಗುವಂತೆ ರಾಜೀನಾಮೆ ನೀಡಬೇಕು ಎಂಬುದು ಪಕ್ಷದ ಹೇಳಿಕೆಯಾಗಿದೆ.ಈ ಬಗ್ಗೆ ಪ್ರತಿಕ್ರಯಿಸಿರುವ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ನನ್ನ ಅವಧಿಯಲ್ಲಿ ಪ್ರಾರಂಭಗೊಂಡು ಉಳಿದಿರುವ ಕಾಮಗಾರಿಗಳನ್ನು ಮುಗಿಸಲು ಪಕ್ಷದ ಮುಖಂಡರಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ನಾನು ಪಕ್ಷಕ್ಕೆ ನಿಷ್ಠನಾಗಿಯೇ ಇದ್ದು ಬಿಜೆಪಿ ಸೇರುತ್ತೇನೆಂಬ ಆರೋಪ ಸುಳ್ಳು. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ಕರೆದು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದರು.
ಪಪಂಯ ಹಾಲಿ ಹಿರಿಯ ಬಿಜೆಪಿ ಸದಸ್ಯ ಸಂದೇಶ್ ಜವಳಿ, ಇದು ಕಾಂಗ್ರೆಸ್ ಪಕ್ಷದ ಆಂತರಿಕ ಸಮಸ್ಯೆಯಾಗಿದ್ದು ಈ ಕೂಡಲೇ ಏನನ್ನೂ ಹೇಳಲಾಗದು. ಅವಿಶ್ವಾಸ ಗೊತ್ತುವಳಿ ಸಭೆಯ ನಂತರದಲ್ಲಿ ನಡೆಯುವ ಬೆಳವಣಿಗೆ ನಂತರದಲ್ಲಿ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ನಾವು ಕೂಡಾ 6 ಮಂದಿ ಸದಸ್ಯರಿದ್ದು ಸಂಸದರು ಮತ್ತು ಶಾಸಕರ ಬೆಂಬಲವೂ ನಮಗಿದೆ ಎಂದಿದ್ದಾರೆ.;Resize=(128,128))
;Resize=(128,128))
;Resize=(128,128))