ರಾಜ್ಯಕ್ಕೆ 70 ಟಿಎಂಸಿ ನೀರು ಹರಿಸುವ ಮೂಲಕ ಕಾವೇರಿ ಕೊಳ್ಳದ ರೈತರ ಹಿತ ಕಾಪಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮುಂದಿನ ತಿಂಗಳು ರಿಟ್‌ ಅರ್ಜಿ ಸಲ್ಲಿಸುವುದಾಗಿ ಕಾವೇರಿ ನದಿ ರಕ್ಷಣಾ ಸಮಿತಿ ತಿಳಿಸಿದೆ

ಬೆಂಗಳೂರು : ರಾಜ್ಯಕ್ಕೆ 70 ಟಿಎಂಸಿ ನೀರು ಹರಿಸುವ ಮೂಲಕ ಕಾವೇರಿ ಕೊಳ್ಳದ ರೈತರ ಹಿತ ಕಾಪಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮುಂದಿನ ತಿಂಗಳು ರಿಟ್‌ ಅರ್ಜಿ ಸಲ್ಲಿಸುವುದಾಗಿ ಕಾವೇರಿ ನದಿ ರಕ್ಷಣಾ ಸಮಿತಿ ತಿಳಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್‌.ಕೆ.ರಾಮು ಅವರು, ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗಾಗಿ ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎನ್.ಗೋಪಾಲಗೌಡರ ನೇತೃತ್ವದಲ್ಲಿ ಏ.27 ರಿಂದ 29ರವರೆಗೆ ಕಾವೇರಿ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ, ದಾಖಲೆ ಸಂಗ್ರಹಿಸುವುದಾಗಿ ತಿಳಿಸಿದರು.

ಈ ಬಾರಿ ಬೇಸಿಗೆ ಬಿರುಸಾಗಿದೆ. ಮುಂದೆ ಮುಂಗಾರು ಕೂಡ ದುರ್ಬಲ ಆಗಲಿರುವುದಾಗಿ ಮಾಹಿತಿಯಿದೆ. ಕಳೆದ 2023ರಲ್ಲಿ ಇದೇ ರೀತಿ ಪರಿಸ್ಥಿತಿಯುಂಟಾಗಿ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಬೆಳೆಗೆ, ಜನ ಜಾನುವಾರುಗಳಿಗೂ ನೀರಿಲ್ಲದೆ ಕಷ್ಟವಾಗಿತ್ತು. ರಾಜ್ಯದ ಕಾವೇರಿ ಕೊಳ್ಳದ ಪ್ರದೇಶದಲ್ಲಿ ಈಗ ಹಿಂದಿನ ಪರಿಸ್ಥಿತಿಯಿಲ್ಲ. ಬೆಂಗಳೂರಿಗೆ ನೀರು ಸಾಕಾಗುತ್ತಿಲ್ಲ. ಜನಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ, ಹಿಂದಿನ ತೀರ್ಪನ್ನು ಇಟ್ಟುಕೊಂಡು ಈಗಲೂ ನೀರು ನೀಡುತ್ತಿರುವುದು ರಾಜ್ಯದ ರೈತರ ಪಾಲಿಗೆ ಕುಣಿಕೆಯಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.

2018ರ ತೀರ್ಪಿಂದ ಅನ್ಯಾಯ:

2018ರ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಸದ್ಯ ರಾಜ್ಯಕ್ಕೆ ಸಿಗುತ್ತಿರುವ 284.75 ಟಿಎಂಸಿ ನೀರು ಸಾಲುತ್ತಿಲ್ಲ. ಹೀಗಾಗಿ ಹೆಚ್ಚುವರಿ 70 ಟಿಎಂಸಿ ನೀರು ನೀಡುವಂತೆ ಆಗ್ರಹಿಸಿ, ಹೆಚ್ಚುವರಿಯಾಗಿ ಹರಿದು ಹೋಗುವ ನೀರು ತಡೆಯುವಂತೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು

ಅದಕ್ಕೂ ಮುನ್ನ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡು ಜಲಾಶಯಗಳ, ರೈತರ ಸಂಕಷ್ಟದ ನೈಜ ಸ್ಥಿತಿಯ ಮಾಹಿತಿ ಸಂಗ್ರಹಿಸಲಿದ್ದೇವೆ. ಏ.27ರಂದು ಬಾಗಮಂಗಲ ತಲಕಾವೇರಿಯಲ್ಲಿ ಬೆಳಗ್ಗೆ 8.30ಕ್ಕೆ ಪೂಜೆ ಸಲ್ಲಿಸಿ ಅಧ್ಯಯನ ಆರಂಭಿಸಲಾಗುವುದು. ಅಂದು ಹಾರಂಗಿ ಅಣೆಕಟ್ಟು, ಹೇಮಾವತಿ ಅಣೆಕಟ್ಟು ವೀಕ್ಷಣೆ ಮಾಡಿ ಸ್ಥಳೀಯ ರೈತರು, ಕಾರ್ಮಿಕರ ಜತೆಗೆ ಸಮಾಲೋಚನೆ ನಡೆಸಲಿದ್ದೇವೆ. ಏ.28ರಂದು ಕೆಆರ್‌ಎಸ್ ಡ್ಯಾಂ ಪರಿಶೀಲಿಸಿ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಿವೃತ್ತ ನ್ಯಾಯಾಧೀಶ ಎನ್. ಗೋಪಾಲಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಕಾವೇರಿ ಕೊಳ್ಳದ ಶಾಸಕರು, ಸಂಸದರು, ನೀರಾವರಿ ತಜ್ಞರು ಹಾಗೂ ಕಾನೂನು ತಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಏ. 29ರಂದು ಕಬಿನಿ, ನಂಜನಗೂಡು, ಟಿ.ನರಸಿಪುರದಲ್ಲಿ ತಿರುಗಾಡಿ ಮೇಕೆದಾಟು ಬಳಿ ಸಭೆ ನಡೆಸಲಾಗುವುದು ಎಂದು ಹೇಳಿದರು.

ಕಾನೂನು ಹೋರಾಟ:

ಈ ವರದಿಗಳನ್ನು ಆಧಾರವಾಗಿಟ್ಟುಕೊಂಡು ಮುಂದೆ ಕಾನೂನು ಹೋರಾಟ ಕೈಗೊಳ್ಳಲಾಗುವುದು. ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ, ಮಾಜಿ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಮನಿಕೃಷ್ಣ, ನಿವೃತ್ತ ಐಎಫ್‌ಎಸ್ ಅಧಿಕಾರಿ ಶ್ರೀಕಂಠಯ್ಯ , ಮಾಜಿ ಎಂಎಲ್‌ಸಿ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು.