ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು

KannadaprabhaNewsNetwork | Published : Nov 1, 2024 12:14 AM

ಸಾರಾಂಶ

ದೀಪಾವಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ರಸ್ತೆಗಳಲ್ಲಿ ವಾಹನಗಳ ಸಂಚಾರ ಮಿತಿಮೀರಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆಯೂ ಕಾಡಿತು.

ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು । ತಾಲೂಕು ಕ್ರೀಡಾಂಗಣದಲ್ಲಿ ತಾತ್ಕಾಲಿಕ ಮಾರುಕಟ್ಟೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ದೀಪಾವಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ರಸ್ತೆಗಳಲ್ಲಿ ವಾಹನಗಳ ಸಂಚಾರ ಮಿತಿಮೀರಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆಯೂ ಕಾಡಿತು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ದೀಪಾವಳಿ ನಿಮಿತ್ತವೇ ತಾತ್ಕಾಲಿಕ ಮಾರುಕಟ್ಟೆ ತೆರೆಯಲು ಅವಕಾಶ ನೀಡಲಾಗಿದ್ದು, ಹಣ್ಣು, ಹೂವು, ಬಾಳೆ ಕಂಬ ಸೇರಿದಂತೆ ಮೊದಲಾದ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಹೀಗಾಗಿ, ಇಲ್ಲಿಗೆ ಜನರು ಖರೀದಿಗಾಗಿ ಮುಗಿಬೀಳುತ್ತಿರುವುದರಿಂದ ತಾಲೂಕು ಕ್ರೀಡಾಂಗಣದಲ್ಲಿ ಜನವೋ ಜನ ಎನ್ನುವಂತೆ ಆಗಿದೆ.

ಹೂ, ಹಣ್ಣು, ತರಕಾರಿ, ಬಾಳೆ ಕಂಬ, ಮಾವಿನ ತೋಳಲು ಸೇರಿದಂತೆ ಮೊದಲಾದವುಗಳನ್ನು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ.ಭಾರಿ ದುಬಾರಿ:

ದೀಪಾವಳಿ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಎಲ್ಲವೂ ತುಟ್ಟಿಯೋ ತುಟ್ಟಿ ಎನ್ನುವಂತೆ ಆಗಿದೆ, ಹತ್ತು ರುಪಾಯಿ ಬೆಲೆ ಇದ್ದಿದ್ದು ನಲವತ್ತು ರುಪಾಯಿ ಆಗಿದೆ. ಹಣ್ಣು, ಹೂ ಎಲ್ಲವೂ ದುಬಾರಿಯಾಗಿರುವುದು ಕಂಡು ಬಂದಿತು.

ಹೀಗಾಗಿ, ಖರೀದಿ ಮಾಡುವವರು ನಾಲ್ಕು ಬದಲಾಗಿ ಎರಡೇ ಖರೀದಿ ಮಾಡುತ್ತಿರುವುದು ಕಂಡು ಬಂದಿತು. ಅಯ್ಯೋ ಮಾರುಕಟ್ಟೆಯಲ್ಲಿ ಏನು ಖರೀದಿ ಮಾಡುವಂತೆಯೇ ಇಲ್ಲ ಬಿಡ್ರಿ ಎಂದು ಬೇಸರಿಸಿಕೊಳ್ಳುತ್ತಿದ್ದರು. ಆದರೂ ಹಬ್ಬವಾಗಿರುವುದರಿಂದ ಬಿಡುಗಡೆ ಇಲ್ಲದೆ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಹ ಹೇಳುತ್ತಿದ್ದರು.ಪ್ಲಾಸ್ಟಿಕ್ ಹೂ:

ನೈಜ ಹೂಗಳನ್ನು ನಾಚಿಸುವಂತೆ ಪ್ಲಾಸ್ಟಿಕ್ ಹೂಗಳು ಲಗ್ಗೆ ಇಟ್ಟಿವೆ. ನೈಜ ಹೂಗಳ ದರಕ್ಕಿಂತಲೂ ಅಗ್ಗದ ದರದಲ್ಲಿ ಅವುಗಳ ಮಾರಾಟವಾಗುತ್ತಿರುವುದು ಕಂಡು ಬಂದಿದ್ದರಿಂದ ನೈಜ ಹೂಗಳನ್ನು ಖರೀದಿ ಮಾಡುವುದಕ್ಕಿಂತ ಪ್ಲಾಸ್ಟಿಕ್ ಹೂಗಳನ್ನು ಖರೀದಿ ಮಾಡುತ್ತಿರುವುದು ಕಂಡು ಬಂದಿತು. ದೇವರಿಗೆ ಒಂದಷ್ಟು ಹೂ ಖರೀದಿ ಮಾಡುತ್ತಿದ್ದರು, ಉಳಿದಂತೆ ಬಾಗಿಲಿಗೆ ಹಾಕುವ, ಮನೆಗೆ ಹಾಕುವ ಹಾರಗಳನ್ನು ಪ್ಲಾಸ್ಟಿಕ್ ಹೂಗಳನ್ನೇ ಖರೀದಿ ಮಾಡುತ್ತಿದ್ದರು.ಪಟಾಕಿ ಮಾರಾಟ ಜೋರು:

ಸರ್ಕಾರ ಪಟಾಕಿ ನಿಷೇಧ ಮಾಡಿದ್ದು, ಕೇವಲ ಹಸಿರು ಪಟಾಕಿಯನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೂ ಹಸಿರು ಪಟಾಕಿಯನ್ನೇ ಖರೀದಿಸಲು ಜನರು ಮುಗಿಬಿದ್ದಿರುವುದು ಕಂಡು ಬಂದಿತು.

ತಾಲೂಕು ಕ್ರೀಡಾಂಗಣದಲ್ಲಿ ಹತ್ತಾರು ಪಟಾಕಿ ಅಂಗಡಿಗಳು ಇದ್ದರೂ ಖರೀದಿಗೆ ಜಾಗ ಇಲ್ಲದಷ್ಟು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದರು. ಮಧ್ಯಾಹ್ನದ ವೇಳೆಗೆ ನಾಲ್ಕಾರು ಅಂಗಡಿಗಳಲ್ಲಿ ಪಟಾಕಿಯೇ ಖಾಲಿಯಾಗುವಂತೆ ಆಯಿತು. ಚೀನಾ ಪಟಾಕಿಗಳಿಗೆ ಬ್ರೇಕ್:

ಚೀನಾ ಮೂಲದ ಪಟಾಕಿಗಳ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಹುಡುಕಿದರೂ ಚೀನಾ ಮೂಲದ ಒಂದೇ ಒಂದು ಪಟಾಕಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಚೀನಾ ಪಟಾಕಿಗಳದ್ದೆ ಆರ್ಭಟವಾಗಿತ್ತು. ಆದರೆ, ಈ ವರ್ಷ ಅವುಗಳ ಸುಳಿವು ಇರಲಿಲ್ಲ ಎನ್ನುವ ಬಗ್ಗೆ ಜನರಲ್ಲಿ ಪರವಿರೋಧದ ಚರ್ಚೆ ನಡೆದವು.

Share this article