ಕನ್ನಡಪ್ರಭ ವಾರ್ತೆ ಇಂಡಿ
ಯುಗಾದಿ ಹಬ್ಬದ ನಿಮಿತ್ತ ಶನಿವಾರ ವಿವಿಧ ತಾಲೂಕಿನ ನಾನಾ ಕಡೆಯಿಂದ ಆಗಮಿಸಿದ್ದ ನೂರಾರು ಪಲ್ಲಕ್ಕಿಗಳು ಹಾಗೂ ದೇವರ ಉತ್ಸವ ಮೂರ್ತಿ, ಪರಿಕರಗಳ ಶುಧ್ಧೀಕರಣ ಕಾರ್ಯ ಭರದಿಂದ ನಡೆಯಿತು. ಜಿಲ್ಲೆಯ ಇಂಡಿ, ಸಿಂದಗಿ ಹಾಗೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಿರಿಯಾಳ, ಬೊಸಗಾ, ಉಡಚಣ, ಹಟ್ಟಿ, ಬಳಗಾನೂರ, ಚಾಂದಕವಟೆ, ಹೂವಿನಹಳ್ಳಿ, ಗೋಳಸಾರ, ಲಾಳಸಂಗಿ, ಸಾತಲಗಾಂವ ಸೇರಿದಂತೆ ನಾನಾ ಗ್ರಾಮಗಳ ಭಕ್ತರು ಪಲ್ಲಕ್ಕಿಗಳನ್ನು ಹೊತ್ತು ಇಲ್ಲವೇ ವಾಹನಗಳ ಮೂಲಕ ತಂದು ಸಂಪ್ರದಾಯದಂತೆ ಶುದ್ಧೀಕರಣ ಮಾಡಿದರು. ಪೂಜೆ ವೇಳೆ ಪಲ್ಲಕ್ಕಿಗಳು ಅರಿಶಿಣ ಭಂಡಾರದಲ್ಲಿ ಮಿಂದೆದ್ದವು.
ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನ ನೂರಾರು ದೇವರ ಉತ್ಸವ ಮೂರ್ತಿಗಳನ್ನು, ಪಲ್ಲಕ್ಕಿಗಳನ್ನು ಊರಿನ ಜನರು ಸೇರಿ ಡೊಳ್ಳು ಬಾರಿಸುತ್ತ ಮಿರಗಿ ಗ್ರಾಮದ ಬಳಿಯ ಭೀಮಾನದಿಗೆ ಆಗಮಿಸಿದ್ದರು. ನದಿಯ ಎರಡು ದಂಡೆಯ ಮೇಲೆ ಛತ್ರಿ, ಚಾಮರ, ಪಲ್ಲಕ್ಕಿಗಳ ಸಂಭ್ರಮ ಮನೆ ಮಾಡಿತ್ತು. ಕಳಶಗಳ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ವಾದನ, ಕೊಂಬು ಊದುವುದು ವಾದ್ಯಗಳ ಸದ್ದು ಮಾರ್ದನಿಸಿದವು.ಸಿಂದಗಿ ನಿಲಗಂಗಾ, ಬಳಗಾನೂರ ಕೆಂಚರಾಯ, ಭೀರದೇವರು, ಬಸವೇಶ್ವರ, ಅಮೋಘಸಿದ್ದೇಶ್ವರ, ಲಕ್ಷ್ಮಿ, ಮರಗಮ್ಮ ಹೀಗೆ ಅನೇಕ ದೇವರ ಮೂರ್ತಿಗಳನ್ನು ಮಿರಗಿ ಭೀಮಾನದಿಯಲ್ಲಿ ಸ್ನಾನ ಮಾಡಿಸುವುದು ವಾಡಿಕೆ. ಯುವಕ, ಯುವತಿಯರು, ಹಿರಿಯರು ಭೀಮೆಯಲ್ಲಿ ಪುಣ್ಯಸ್ನಾನ ಮಾಡಿ, ಮಡಿಯಲ್ಲಿಯೇ ದೇವರ ಮೂರ್ತಿಗಳನ್ನು ಶುಚಿಗೊಳಿಸಿ ನಂತರ ಪಲ್ಲಕ್ಕಿಗಳನ್ನು ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿ ನೈವೇಧ್ಯ ಅರ್ಪಿಸಿ ಪ್ರಸಾದ ಸೇವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.