ಗದಗ: ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ಸಡಗರ, ಸಂಭ್ರಮ, ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಆಚರಿಸಲಾಯಿತು.
ಉಪವಾಸ: ಬೆಳಗ್ಗೆಯೇ ದೇವರ ದರ್ಶನ ಪಡೆದ ಭಕ್ತರು ಸಂಜೆಯವರೆಗೂ ಉಪವಾಸ ವ್ರತ ಮಾಡಿ ಸಂಜೆಯಾಗುತ್ತಿದ್ದಂತೆ ಮತ್ತೆ ಶಿವನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ, ದೇವರಿಗೆ ವಿವಿಧ ಹಣ್ಣು, ವಿಶೇಷ ಸಿಹಿ ತಿನಿಸುಗಳನ್ನು ಎಡೆಮಾಡಿದರು. ನಂತರ ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಹಾಗೂ ತಂಪು ಪಾನೀಯಗಳನ್ನು ಸೇವಿಸುವ ಮೂಲಕ ತಮ್ಮ ಉಪವಾಸ ವ್ರತ ಪೂರ್ಣಗೊಳಿಸಿದರು.
ಪ್ರಸಾದ ವ್ಯವಸ್ಥೆ: ಪ್ರತಿಯೊಂದು ದೇವಾಲಯಗಳಲ್ಲಿಯೂ ಆಗಮಿಸುವ ಭಕ್ತರಿಗೆ ವಿವಿಧ ಹಣ್ಣುಗಳಿಂದ ತಯಾರಿಸಿದ ಪ್ರಸಾದ ಮತ್ತು ತಂಪು ಪಾನೀಯ ವಿತರಿಸಲಾಯಿತು. ರಾತ್ರಿಯಲ್ಲಿ ಶಿವ ಜಾಗರಣೆಗಾಗಿ ವಿಶೇಷ ಭಜನಾ ವ್ಯವಸ್ಥೆ ಕೂಡಾ ಕಲ್ಪಿಸಲಾಗಿತ್ತು.ಮಹಾಶಿವರಾತ್ರಿಯ ವಿಶೇಷ ಪೂಜೆಗದಗ: ಇಲ್ಲಿಯ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಾನುವಾರ ಮಹಾ ಶಿವರಾತ್ರಿಯ ಅಂಗವಾಗಿ ಕಾಶಿ ವಿಶ್ವನಾಥನಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು.
ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಪದಾಧಿಕಾರಿಗಳು ಹಾಗೂ ಹಿರಿಯರು ಬಂದ ಭಕ್ತರೆಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಈ ವೇಳೆ ಸಾನ್ನಿಧ್ಯವನ್ನು ಲಕ್ಕುಂಡಿಯ ಅಲ್ಲಮಪ್ರಭು ದೇವರಮಠದ ಸಿದ್ಧಲಿಂಗ ಸ್ವಾಮಿಗಳು, ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎ.ಟಿ. ನರೇಗಲ್ಲ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ಆರ್.ಆರ್. ಕಾಶಪ್ಪನವರ, ಕಾರ್ಯದರ್ಶಿ ಕೆ.ಪಿ. ಗುಳಗೌಡರ ಸೇರಿದಂತೆ ಸಮಿತಿಯ ನಿರ್ದೆಶಕರು, ಗಣ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.