ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞರ ಜಯಂತಿಯನ್ನು ಆಚರಿಸಲಾಯಿತು.
ಸಿಂಧನೂರು: ಸಂತ ಕವಿ, ತ್ರಿಕಾಲ ಜ್ಞಾನಿ ಸರ್ವಜ್ಞರ ತ್ರಿಪದಿಗಳು ಸಾರ್ವಕಾಲಿಕವಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜೀವನ ಸುಖಮಯವಾಗುತ್ತದೆ ಎಂದು ಅಹಿಂದ ಪ್ರಧಾನ ಕಾರ್ಯದರ್ಶಿ ನಿರುಪಾದೆಪ್ಪ ಗುಡಿಹಾಳ ವಕೀಲ ಹೇಳಿದರು.
ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲೂಕಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ‘ಕವಿಗಳಲ್ಲಿ ತ್ರಿಪದಿ ಕವಿ ಎಂದೇ ಖ್ಯಾತಿ ಗಳಿಸಿದ ಸರ್ವಜ್ಞರ ವಚನಗಳು ಆಡು ಭಾಷೆಯ ನೆಲೆಗಟ್ಟಿನಲ್ಲಿ ಇತಿಹಾಸ ಸೃಷ್ಟಿಸಿವೆ. ಸಮಾಜದ ಅಂಕು-ಡೊಂಕು, ಜಾತಿ ಕುಲದ ವಿಷಯ ಕುರಿತು ನಿಂತಲ್ಲೇ ತ್ರಿಪದಿ ರಚಿಸಿ ವಿಮರ್ಶಿಸುತ್ತಿದ್ದ ಸರ್ವಜ್ಞರು ಅಗಾಧ ಪಾಂಡಿತ್ಯ ಹೊಂದಿದ್ದರು. ಒಳಿತು ಮತ್ತು ಕೆಡುಕಿನ ವ್ಯತ್ಯಾಸ ತಿಳಿಸಿ, ಸನ್ಮಾರ್ಗದ ದಾರಿ ತೋರುತ್ತಿದ್ದರು’ ಎಂದರು.
ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ ಹಾಗೂ ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು. ಶಾಂತಾ ವಳಗಿನಮನಿ ಕವನ ವಾಚಿಸಿದರು. ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ನಿವೃತ್ತ ಶಿಕ್ಷಣಾಧಿಕಾರಿ ಹೆಚ್.ಜಿ.ಹಂಪಣ್ಣ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರಾದ ಹೆಚ್.ಎನ್.ಬಡಿಗೇರ್, ಖಾಜಿಮಲಿಕ್ ವಕೀಲ, ಕುಂಬಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ಕುಂಬಾರ ಅಲಬನೂರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.