ಧಾರವಾಡ:
ರೈತರು ತಮ್ಮ ಕುಟುಂಬದೊಂದಿಗೆ ಟ್ರ್ಯಾಕ್ಟರ್, ಚಕ್ಕಡಿ ಮೂಲಕ ತಮ್ಮ ತಮ್ಮ ಹೊಲಗಳಿಗೆ ಹೋಗಿ ಭೂಮಿ ತಾಯಿ ಪೂಜೆ ಮಾಡಿ ಚರಗಾ ಎಲ್ಲಿ ಹಬ್ಬವನ್ನು ಆಚರಿಸಿದರು. ಭೂಮಿ ತಾಯಿಯ ಸೀಮಂತ ಎಂದೇ ಕರೆಯುವ ಶೀಗೆ ಹುಣ್ಣಿಮೆಯ ಆಚರಣೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಧಾರವಾಡ ಭಾಗದಲ್ಲಿ ಸಂಭ್ರಮದಿಂದ ಜರುಗಿತು.
ತಾಲೂಕಿನ ಲಕಮಾಪೂರ, ಕಮಲಾಪೂರ, ಅಮ್ಮಿನಬಾವಿ, ಉಪ್ಪಿನ ಬೆಟಗೇರಿ, ನರೇಂದ್ರ, ಗರಗ, ಯಾದವಾಡ, ನಿಗದಿ, ದೇವರ ಹುಬ್ಬಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಟುಂಬ ಸಮೇತ ಹಬ್ಬವನ್ನು ಆಚರಿಸಿದರು. ಈ ಸಂಭ್ರಮಕ್ಕೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಹುರಕ್ಕಿ ಹೋಳಿಗೆ, ವಿವಿಧ ಬಗೆಯ ಚಟ್ನಿ, ಪಲ್ಯ, ಹಪ್ಪಳ, ಸಂಡಿಗೆ, ಜೋಳದ ವಡೆ ಸೇರಿದಂತೆ ಹಲವು ಖಾದ್ಯಗಳು ಮತ್ತಷ್ಟು ಮರೆಗು ನೀಡಿದವು. ಮಕ್ಕಳು ಹೊಲದ ಬಯಲಿನಲ್ಲಿ ಗಾಳಿಪಟ ಹಾರಿಸಿ ಖುಷಿಪಟ್ಟರು.ವಿಶೇಷ ಎಂದರೆ ಬರೀ ಗ್ರಾಮೀಣ ಜನರು ಮಾತ್ರವಲ್ಲದೇ ನಗರದ ಜನರು ಸಹ ಈ ಹಬ್ಬವನ್ನು ಆಚರಿಸಿದರು. ಕೆಲವರು ತಮ್ಮದೇ ತೋಟಗಳಿಗೆ ತೆರಳಿದರೆ, ಮತ್ತೆ ಕೆಲವರು ತಮ್ಮ ಸ್ನೇಹಿತರ, ಸಂಬಂಧಿಗಳ ಹೊಲಗಳಿಗೆ ಹೋಗಿ ಅವರೊಂದಿಗೆ ಹಬ್ಬ ಆಚರಿಸಿದರು. ಇನ್ನು ಕೆಲವರು ನಗರದ ಉದ್ಯಾನವನಗಳಿಗೆ ಹೋಗಿ ಕುಟುಂಬ ಸಮೇತ ಊಟ ಮಾಡಿ ಹಬ್ಬ ಆಚರಿಸಿದರು.