ಕಾಂಗ್ರೆಸ್‌ನ ಗಾಯಿತ್ರಿ ಶಾಂತೇಗೌಡ ಬೆಂಬಲಿಗರಿಂದ ಸಂಭ್ರಮಾಚರಣೆ

KannadaprabhaNewsNetwork |  
Published : Jul 17, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುವಿಧಾನ ಪರಿಷತ್ ಸದಸ್ಯತ್ವ ರದ್ದತಿ ಪ್ರಶ್ನಿಸಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಾಯಿತ್ರಿ ಶಾಂತೇ ಗೌಡ ಬೆಂಬಲಿಗರು ಮತ್ತು ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಧಾನ ಪರಿಷತ್ ಸದಸ್ಯತ್ವ ರದ್ದತಿ ಪ್ರಶ್ನಿಸಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಾಯಿತ್ರಿ ಶಾಂತೇ ಗೌಡ ಬೆಂಬಲಿಗರು ಮತ್ತು ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

2021ರ ಡಿಸೆಂಬರ್ ನಲ್ಲಿ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತಿಗೌಡ ವಿರುದ್ಧ ಕೇವಲ ಆರು ಮತಗಳ ಅಂತರ ದಿಂದ ಗೆಲುವು ಸಾಧಿಸಿದ್ದರು.

ಈ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನಾಮ ನಿರ್ದೇಶತ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ ಎಂದು ತೀರ್ಪು ನೀಡಿತ್ತು.

ಈ ತೀರ್ಪಿನ ವಿರುದ್ಧವಾಗಿ ಪ್ರಾಣೇಶ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನಾಮನಿರ್ದೇಶಿತ ಸದಸ್ಯರ 12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರುಮತ ಎಣಿಕೆ ಮಾಡಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು.

ಅದರಂತೆ ಮರುಮತ ಎಣಿಕೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕೋರ್ಟ್ ಆದೇಶದಂತೆ ಮುಚ್ಚಿದ ಲಕೋಟೆಯಲ್ಲಿ 2025ರ ಮಾರ್ಚ್ ನಲ್ಲಿ ಕೋರ್ಟ್ ಗೆ ವರದಿ ಸಲ್ಲಿಸಿದ್ದರು.

ಮರು ಮತ ಎಣಿಕೆಗೆ ಆದೇಶಿಸಿದ್ದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಣೇಶ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಪ್ರಾಣೇಶ್ ಅವರ ಮೇಲ್ಮನವಿ ಅರ್ಜಿ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಮರು ಎಣಿಕೆ ಮಾಡ ಲಾದ ಮತಗಳ ಫಲಿತಾಂಶ ಘೋಷಿಸಬೇಕಾದ ಸಾಧ್ಯತೆ ಇದೆ.

2021ರಲ್ಲಿ ಚುನಾವಣೆ, ಮತ ಎಣಿಕೆ ವೇಳೆ ಏನಿತ್ತು?

2021ರ ಡಿಸೆಂಬರ್ 10 ರಂದು ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣಪಂಚಾಯಿತಿಯ 12 ಮಂದಿ ನಾಮನಿರ್ದೇಶನ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.2021ರ ಡಿ. 14 ರಂದು ಮತಎಣಿಕೆ ನಡೆದು ಒಟ್ಟು 2,410 ಮತಗಳಲ್ಲಿ 39 ಅಸಿಂಧುವಾಗಿತ್ತು. 2,371 ಮತ ಸಿಂಧು ವಾಗಿತ್ತು. ಆಗ ವಿಧಾನಪರಿಷತ್ ಉಪಸಭಾಪತಿಯಾದ ಎಂ.ಕೆ.ಪ್ರಾಣೇಶ್ 1,188 ಮತಪಡೆದರೆ, ಗಾಯತ್ರಿಶಾಂತೇಗೌಡ 1,182 ಮತಪಡೆದಿದ್ದರು. ಬಿಜೆಪಿಯ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್‌ನ ಎ.ವಿ.ಗಾಯತ್ರಿಶಾಂತೇಗೌಡ ವಿರುದ್ಧ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ಇದರಿಂದ ಮರು ಮತ ಎಣಿಕೆಗೆ ಗಾಯಿತ್ರಿ ಶಾಂತೇಗೌಡ ಮನವಿ ಸಲ್ಲಿಸಿದ್ದರು. ಆದರೆ, ಆಗ ಜಿಲ್ಲಾ ಚುನಾವಣಾಧಿಕಾರಿ ಯಾಗಿದ್ದ ಕೆ.ಎನ್.ರಮೇಶ್ ಚುನಾವಣಾ ಆಯೋಗದ ಸೂಚನೆ ಮೇರೆಗೆ ಫಲಿತಾಂಶ ಪ್ರಕಟಿಸಿದ್ದರು. ಇದರಿಂದ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಕ ಸದಸ್ಯರಿಗೆ ಮತದಾನದ ಅವಕಾಶವಿಲ್ಲ ಎಂದು ಗಾಯತ್ರಿಶಾಂತೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. 2025ರ ಫೆಬ್ರವರಿ 28ರಂದು ಮರು ಮತ ಎಣಿಕೆ ನಡೆಸಿ ಬಳಿಕ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಗುರುವಾರ ಅಂತಿಮ ತೀರ್ಪು ಪ್ರಕಟಿಸಿದೆ. ಗಾಯತ್ರಿ ಶಾಂತೇಗೌಡ ಅವರ ವಾದ ಪುರಸ್ಕರಿಸಿದ ಈ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಪ್ರಾಣೇಶ್ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.

ಬಾಕಿ ಒಂದೂವರೆ ವರ್ಷಕ್ಕೆ ಅಧಿಕಾರ ನಿರೀಕ್ಷೆವಿಧಾನಪರಿಷತ್‌ ಸದಸ್ಯರ ಅಧಿಕಾವಧಿಯ ಒಟ್ಟು ಆರು ವರ್ಷಗಳಲ್ಲಿ ಈಗಾಗಲೇ ನಾಲ್ಕೂವರೆ ವರ್ಷ ಅಧಿಕಾರ ಪೂರ್ಣ ಗೊಂಡಿದೆ. ಇನ್ನೂ ಕೇವಲ ಒಂದೂವರೆ ವರ್ಷ ಮಾತ್ರ ಬಾಕಿ ಇದೆ. ಈ ಅವಧಿಗೆ ಗಾಯತ್ರಿ ಶಾಂತೇಗೌಡ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಚಲಾಯಿಸುವ ಸಾಧ್ಯತೆಯನ್ನು ಕಾದು ನೋಡಬೇಕಾಗಿದೆ.

---ಕೋಟ್---

ನಾಲ್ಕೂವರೆ ವರ್ಷದಿಂದ ನ್ಯಾಯಕ್ಕಾಗಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಾಗಿತ್ತು. ಇಂದು ನ್ಯಾಯ ಸಿಕ್ಕಿದ್ದು, ಹೈಕೋರ್ಟ್‌ನಲ್ಲಿ ದೊರೆಯಬೇಕಾದ ತೀರ್ಪನ್ನು ಸುಪ್ರೀಂ ಕೋರ್ಟ್‌ ವರೆಗೆ ತೆಗೆದುಕೊಂಡು ಹೋಗಿದ್ದರು. ಆದರಿಂದು ನ್ಯಾಯ ಸಿಕ್ಕಿದೆ.

- ಗಾಯಿತ್ರಿ ಶಾಂತೇಗೌಡ, ಕಾಂಗ್ರೆಸ್‌ ಅಭ್ಯರ್ಥಿ

---ಕೋಟ್‌---

ಪ್ರಾಣೇಶ್‌ ಹಾಗೂ ಗಾಯಿತ್ರಿ ಶಾಂತೇಗೌಡರ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಆದೇಶದ ಪ್ರತಿ ಸಿಕ್ಕಿಲ್ಲ. ಆದೇಶ ಪ್ರತಿ ಲಭ್ಯವಾದ ಬಳಿಕ ಈ ಬಗ್ಗೆ ಸ್ಪಷ್ಟಣೆ ದೊರೆಯಲಿದೆ.- ಡಾ.ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯರು

---ಬಾಕ್ಸ್‌---

ಮರುಎಣಿಕೆಯಲ್ಲಿ ಫಲಿತಾಂಶ ಅದಲು-ಬದಲು

ಕಾಫಿನಾಡು ಚಿಕ್ಕಮಗಳೂರು ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಎರಡು ಮರುಮತ ಎಣಿಕೆಗಳು ನಡೆದು ಫಲಿತಾಂಶವೇ ಅದಲು ಬದಲಾದ ವಿಶಿಷ್ಟ ಇತಿಹಾಸಕ್ಕೆ ಜಿಲ್ಲೆ ಸಾಕ್ಷಿಯಾಗಿದೆ. ಈ ಹಿಂದೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆಯೂ ಮತ ಮರುಎಣಿಕೆ ನಡೆದು ಮೊದಲು ಪರಾಭವಗೊಂಡಿದ್ದ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಟಿ.ಡಿ.ರಾಜೇಗೌಡ ನ್ಯಾಯಾಲಯದ ಮೊರೆ ಹೋಗಿ ಮತ ಮರು ಎಣಿಕೆಗೆ ತಡೆಯಾಜ್ಞೆ ತರುವ ಮೂಲಕ ಮತ್ತೆ ಅವರೇ ಶಾಸಕರಾಗಿ ಮುಂದುವರಿದಿದ್ದಾರೆ.ಇದೀಗ ವಿಧಾನ ಪರಿಷತ್ ಚುನಾವಣೆ ಮತ ಮರು ಎಣಿಕೆ ಪ್ರಕ್ರಿಯೆ ತಾರ್ಕಿಕ ಹಂತ ತಲುಪಿದ್ದು, ಪ್ರಸ್ತುತ ಉಪಸಭಾಪತಿ ಯಾಗಿರುವ ಎಂ.ಕೆ.ಪ್ರಾಣೇಶ್ ಅಥವಾ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇದು ಚೆಕ್ ಪೋಸ್ಟ್? ಅಥವಾ ಬಾರ್‌ ಅಂಡ್ ರೆಸ್ಟೋರೆಂಟ್‌?
ಪಂಚಗ್ಯಾರಂಟಿ ಯೋಜನೆಗಳ ಲಾಭ ಅರ್ಹರಿಗೆ ದೊರೆಯಲಿ