ಬೆಳಗಾವಿಬೆಳಗಾವಿ ನಗರದಲ್ಲಿ ನವರಾತ್ರಿಯ ದುರ್ಗಾಮಾತಾ ದೌಡ್‌ಗೆ ಗುರುವಾರ ಚಾಲನೆ ನೀಡಲಾಗಿದ್ದು, ದೈವ, ದೇಶ ಮತ್ತು ಧರ್ಮ ರಕ್ಷಣೆಯ ಜಾಗೃತಿ ಮೂಡಿಸಲು ನವರಾತ್ರಿಯ ಮೊದಲ ದಿನ ಶ್ರೀಶೈಲ ಪುತ್ರಿಯ ಆರಾಧನೆಯೊಂದಿಗೆ ನಗರದಲ್ಲಿ ದುರ್ಗಾಮಾತಾ ದೌಡ್ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರದಲ್ಲಿ ನವರಾತ್ರಿಯ ದುರ್ಗಾಮಾತಾ ದೌಡ್‌ಗೆ ಗುರುವಾರ ಚಾಲನೆ ನೀಡಲಾಗಿದ್ದು, ದೈವ, ದೇಶ ಮತ್ತು ಧರ್ಮ ರಕ್ಷಣೆಯ ಜಾಗೃತಿ ಮೂಡಿಸಲು ನವರಾತ್ರಿಯ ಮೊದಲ ದಿನ ಶ್ರೀಶೈಲ ಪುತ್ರಿಯ ಆರಾಧನೆಯೊಂದಿಗೆ ನಗರದಲ್ಲಿ ದುರ್ಗಾಮಾತಾ ದೌಡ್ ನಡೆಸಲಾಯಿತು.ಐತಿಹಾಸಿಕ ಬೆಳಗಾವಿ ನಗರದಲ್ಲಿ ಪ್ರತಿಯೊಂದು ಹಬ್ಬಗಳಿಗೆ ಒಂದೊಂದು ವಿಶೇಷತೆಯಿದೆ. ಗಣೇಶೋತ್ಸವ ಬಳಿಕ 10 ದಿನಗಳ ಕಾಲ ನಡೆಯುವ ನವರಾತ್ರಿಯಲ್ಲಿ ಬೆಳಗ್ಗೆ ದುರ್ಗಾಮಾತಾ ದೌಡ್ ನಡೆದರೆ ರಾತ್ರಿ ದಾಂಡಿಯಾ ನೃತ್ಯ ನಡೆಯುತ್ತದೆ. 26 ವರ್ಷಗಳಿಂದ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆ ವತಿಯಿಂದ ನಗರದಲ್ಲಿ ನವರಾತ್ರಿಯ ವೇಳೆ ದುರ್ಗಾಮಾತಾ ದೌಡ್ ಆಯೋಜಿಸಲಾಗುತ್ತಿದೆ. ಗುರುವಾರ ನಗರದ ಎಸ್.ಪಿ.ಎಂ. ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಿ, ಪ್ರೇರಣಾ ಮಂತ್ರದೊಂದಿಗೆ ಛತ್ರೆ ಗುರೂಜಿ ಅವರು ಭಗವಾ ಧ್ವಜಾರೋಹಣ ಮಾಡಿ ಚಾಲನೆ ನೀಡಿದರು. ಬುಧವಾರ ರಾತ್ರಿಯಿಂದಲೇ ದೌಡ್ ಸ್ವಾಗತಕ್ಕಾಗಿ ಮಹಿಳೆಯರು ಹಾಗೂ ಕಾರ್ಯಕರ್ತರು ದೌಡ್ ಸಂಚರಿಸುವ ಮಾರ್ಗಗಳಲ್ಲಿ ಬಣ್ಣಬಣ್ಣದ ರಂಗೋಲಿ ತಳಿರು ತೋರಣ, ಕೇಸರಿ ಧ್ವಜಗಳಿಂದ ಶೃಂಗರಿಸಿದ್ದರು. ಭಗವಾ ಪೇಟಾ, ಶ್ವೇತವಸ್ತ್ರ ತೊಟ್ಟ ಧಾರಕಾರಿಗಳು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಅವರಿ ಕೇಳಿ ಬರುತ್ತಿದ್ದ ಉದ್ಘೋಷಗಳು ಮೈ ನವಿರೇಳುವಂತಿತ್ತು. ಪ್ರತಿ ಗಲ್ಲಿಗಳಲ್ಲೂ ದೌಡ್ ಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸುತ್ತಿದ್ದರು. ಬಾಲಶಿವಾಜಿ ಸೇರಿದಂತೆ ಹಿಂದುತ್ವದ ಸಂದೇಶ ಸಾರುವ ರೂಪಕಗಳು ಎಲ್ಲರ ಗಮನ ಸೆಳೆದವು. ಮೊದಲ ದಿನದ ದೌಡ್ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನದಿಂದ ಆರಂಭಗೊಂಡು ದಕ್ಷಿಣ ಕಾಶಿ ಎಂದೇ ಖ್ಯಾತವಾದ ಕಪಿಲೇಶ್ವರ ದೇವಸ್ಥಾನಕ್ಕೆ ತಲುಪಿ ಕೊನೆಗೊಂಡಿತು. ಧ್ಯೇಯ ಮಂತ್ರದೊಂದಿಗೆ ಧ್ವಜಾವರೋಹಣ ಆಚರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.