ಕನ್ನಡಪ್ರಭ ವಾರ್ತೆ ಕೋಲಾರಗೌರಿ ಹಬ್ಬವೇನೋ ಮುಗಿಯಿತು ಇನ್ನು ಗಣಪತಿ ಹಬ್ಬಕ್ಕೆ ಜನ ಸಿದ್ದತೆ ನಡೆಸಿದ್ದು, ಹೂ,ಹಣ್ಣಿನ ಬೆಲೆ ಗಗನಕ್ಕೇರಿದರೂ ಜನರಲ್ಲಿ ಸಂಭ್ರಮವಂತೂ ಕಡಿಮೆಯಾಗಿಲ್ಲ, ಪ್ರತಿ ಬಡಾವಣೆ, ರಸ್ತೆ ರಸ್ತೆಗೂ ಗಣಪನ ಪ್ರತಿಷ್ಠಾಪನೆಗೆ ಸಿದ್ದತೆ ನಡೆದಿದ್ದು, ಯುವಕರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಗೌರಿಹಬ್ಬ ಕೆಲವೊಂದು ಸಮುದಾಯಗಳಿಗೆ ಸೀಮಿತವಾಗಿತ್ತು, ಗಣೇಶನ ಹಬ್ಬ ಪ್ರತಿಯೊಬ್ಬರೂ ಆಚರಣೆ ಮಾಡುತ್ತಾರೆ, ಜತೆಗೆ ಸಾಮೂಹಿಕ ಗಣಪಗಳು ಗಲ್ಲಿಗೊಂದರಂತೆ ತಲೆಯೆತ್ತುತ್ತಿದ್ದು, ಎಲ್ಲಿ ನೋಡಿದರೂ ಗಣಪನ ಪ್ರತಿಷ್ಟಾಪನೆಗೆ ಸಿದ್ದತೆಗಳು ಜೋರಾಗಿಯೇ ನಡೆದಿದ್ದು, ಸಂಭ್ರಮ ಕಂಡು ಬರುತ್ತಿದೆ.ಮಾರುಕಟ್ಟೆಯಲ್ಲಿ ಜನಜಂಗುಳಿ
ಗಣೇಶಗೆ ₹೧೦೦ ರಿಂದ ೩೦ ಸಾವಿರ
ಗಣೇಶ ಮೂರ್ತಿಗಳ ಅಂಗಡಿಗಳನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಟ್ಟಿದ್ದು, ಜತೆಗೆ ವಿವಿಧ ಬಡಾವಣೆಗಳ ಮುಖ್ಯರಸ್ತೆಗಳು, ನಗರದ ಬಸ್ ನಿಲ್ದಾಣದ ಪಕ್ಕದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗ, ಟೇಕಲ್ ರಸ್ತೆಗಳಲ್ಲಿ ಗಣಪನ ಮೂರ್ತಿಗಳ ಮಾರಾಟ ಜೋರಾಗಿ ನಡೆದಿದೆ. ಪರಿಸರ ರಕ್ಷಣೆಗೆ ಜನತೆಯೂ ಸ್ವಯಂಪ್ರೇರಿತರಾಗಿ ಒತ್ತು ನೀಡಿರುವುದರಿಂದ ಈ ಬಾರಿ ನಾಗರೀಕರು ಪರಿಸರ ಸ್ನೇಹಿ ಗಣಪನನ್ನೇ ಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದು ಪರಿಸರ ಸಂರಕ್ಷಣೆಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.ಹೂ,ಹಣ್ಣಿನ ಬೆಲೆಯೂ ಏರಿಕೆಯಾಗಿದ್ದು, ಹಬ್ಬದ ಕಾರಣದಿಂದಲೇ ವ್ಯಾಪಾರಿಗಳು ಬೆಲೆ ಏರಿಸಿದ್ದಾರೆ, ಬಾಳೆ ಹಣ್ಣಿಗೆ ಭಾರಿ ಬೇಡಿಕೆ ಇದ್ದು, ಪ್ರತಿ ಕೆಜಿಗೆ ೧೦೦ ರೂಗೆ ಮಾರಾಟವಾಗುತ್ತಿದೆ. ಉಳಿದಂತೆ ಸೇಬು-೨೦೦ ರಿಂದ ೨೫೦ ರೂಗಳವರೆಗೂ, ಮೂಸಂಬಿ-೧೦೦ ರಿಂದ ೧೨೦, ದಾಳಿಂಬೆ-೧೮೦ ರಿಂದ ೨೦೦, ಪಚ್ಚಬಾಳೆ ಕೆಜಿಗೆ ೪೦ ರೂಗೆ ಮಾರಾಟವಾಗುತ್ತಿದೆ.
ಹೂವಿನ ಹಾರಕ್ಕೆ ₹1000ಹೊರ ರಾಜ್ಯಗಳ ಹೂ ಮಾರುಕಟ್ಟೆಗೆ ಬಂದಿದ್ದರೂ ಹೂವಿನ ಬೆಲೆ ಕಡಿಮೆಯಾಗಿಲ್ಲ, ಬಟನ್ ರೋಸ್ ಈಗ ೨೦೦ ರಿಂದ ೨೫೦ರೂ, ಸೇವಂತಿ ಕೆಜಿಗೆ ೨೫೦ ರೂಗಳಿಂದ ೩೦೦, ಮಲ್ಲಿಗೆ ೧೦೦೦ ರೂನಿಂದ ೧೨೦೦ರೂ, ಕನಕಾಂಬರ ಅದರ ಹೆಸರೇ ಹೇಳುವಂತೆ ಕನಕದಂತೆ ಬೆಲೆ ಏರಿಸಿಕೊಂಡು ಕೆಜಿಗೆ ೧೮೦೦ ದಾಟಿದೆ. ಅಕ್ಕಿ, ಬೆಲ್ಲ, ಶೇಂಗಾ, ಎಣ್ಣೆಗಳು ಹಬ್ಬಕ್ಕೆ ಮೊದಲೇ ಬೆಲೆ ಏರಿಸಿಕೊಂಡು ಬೀಗುತ್ತಿರುವುದರಿಂದ ಹಬ್ಬದಿಂದಾಗಿ ದರ ಏರಿಕೆಯಾಯಿತು ಎಂಬ ಆರೋಪಗಳಂತೂ ಇಲ್ಲ. ಒಟ್ಟಾರೆ ಹಬ್ಬದ ಹೆಸರಲ್ಲಿ ನಾಗರೀಕರ ಜೇಬಿಗೆ ಕತ್ತರಿ ಬೀಳುವುದಂತೂ ದಿಟ.