ಕನ್ನಡಪ್ರಭ ವಾರ್ತೆ ರಾಮದುರ್ಗ:
ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ನಡೆಸುವ ನಿರ್ಧಾರ ತೆಗೆದುಕೊಂಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಅಭಿನಂದಿಸಿರುವ ಅಂಗನವಾಡಿ ನೌಕರರು, ರಾಮದುರ್ಗದಲ್ಲಿ ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಿದರು. ಅಲ್ಲದೇ, ಸರ್ಕಾರದ ನಡೆಯನ್ನು ಸ್ವಾಗತಿಸಿ ಸಂಭ್ರಮಿಸಿದರು.1975ರಿಂದ ಪ್ರಾರಂಭವಾದ ಐಸಿಡಿಎಸ್ ಯೋಜನೆಯಡಿಯಲ್ಲಿ ಗೌರವಧನದ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ನೌಕರರು ಹಲವಾರು ವರ್ಷಗಳಿಂದ ಎಲ್‌ಕೆಜಿ, ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಬೇಕೆಂದು ಒತ್ತಾಯ ಮಾಡುತ್ತಾ ಬಂದಿದೆ. ಜೂನ್ 19 ರಿಂದ ಅಂಗನವಾಡಿ ನೌಕರರು ಬೆಂಗಳೂರಲ್ಲಿ ಅನಿರ್ದಿಷ್ಟ ಮುಷ್ಕರವನ್ನು ನಡೆಸುವ ಮೂಲಕ ಎಲ್‌ಕೆಜಿ, ಯುಕೆಜಿ ಅಂಗನವಾಡಿಗಳಲ್ಲಿ ಪ್ರಾರಂಭಿಸಬೇಕೆಂದು ಸರ್ಕಾರದ ಮೆಲೆ ಒತ್ತಡ ಹೇರಿದ್ದೇವು. ಈ ಪ್ರಯುಕ್ತ ಸರ್ಕಾರ ನಿಷ್ಪಕ್ಷಪಾತವಾಗಿ ಚರ್ಚಿಸಿ ಸಂಘಟನೆಯ ಮುಖಂಡರಮನ್ನು ಕರೆದು ಮುಖ್ಯಮಂತ್ರಿಗಳು, ಇಲಾಖೆಯ ಸಚಿವರನ್ನು, ಶಿಕ್ಷಣ ಸಚಿವರನ್ನು ಕರೆದು ಸುದೀರ್ಘವಾಗಿ ಚರ್ಚಿಸಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಇದು ಅಂಗನವಾಡಿ ನೌಕರರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ವಿಜಯೋತ್ಸವ ಆಚರಿಸಿದರು.ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆದ ಸಭೆಯನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಜಿ.ಎಂ.ಜೈನೆಖಾನ್ ಮಾತನಾಡಿ, ಮುಖ್ಯಮಂತ್ರಿಗಳಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿಚೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಜೂನ್ 19-20 ಎರಡು ದಿನ ಹಗಲು ಇರುಳು ಹೋರಾಟ ಮಾಡಿದ ಪ್ರಯುಕ್ತ ಇಂದು ಎಲ್‌ಕೆಜಿ, ಯುಕೆಜಿ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಲು ಸಹಾಯಕವಾಗಿದೆ. ನಾವು ನಡೆಸಿದ ಧರಣಿ ಸರ್ಕಾರದ ಮೇಲೆ ಗಂಭೀರ ಪರಿಣಾಮ ಭೀರಿದೆ. ಇಂದು ಸರ್ಕಾರ ಅದನ್ನು ಮನಗಂಡು ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಒಪ್ಪಿಕೊಂಡಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ದೊಡ್ಡವ್ವ ಪೂಜಾರಿ ಅಂಗನವಾಡಿ ನೌಕರರ ಹೋರಾಟವನ್ನು ಸ್ಮರಿಸಿದರು. ಒಕ್ಕಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ ಅಂಗನವಾಡಿ ನೌಕರರ ಹೋರಾಟ ಮೆಚ್ಚುಂತದ್ದು ಎಂದು ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ನಾಗಪ್ಪ ಸಂಗೊಳ್ಳಿರವರು ಕೊಂಡಾಡಿದರು.ಈ ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ತುಳಸಮ್ಮ ಮಾಳದಕರ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಮಹಾದೇವಿ ಕೆರೂರ, ಶೈಲಾ ಕುಂಬಾರ, ಯಶೋಧಾ ಹೊಸಕೋಟಿ, ವಿಜಯಲಕ್ಷ್ಮೀ ಸಿದ್ದಿಬಾವಿ ಮತ್ತು ಡಬ್ಬಾ ಅಂಗಡಿ ಸಂಘಟನೆಯ ಪಾರೂಖ್ ಶೇಖ್, ಮಹಬೂಬ ನದಾಫ, ತೌಫಿಕ್ ಗೋಕಾಕ ಮುಂತಾದವರು ಉಪಸ್ಥಿತರಿದ್ದರು. ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿರವರು ಎಲ್ಲರಿಗೂ ಸ್ವಾಗತಿಸಿ, ವಂದಿಸಿದರು.