ಗದಗ: ದೇಶದ ಆರ್ಥಿಕ ಅಭಿವೃದ್ಧಿಗೆ ಸಂವಿಧಾನದ ಆಶಯವೇ ಮೂಲ ಮಂತ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಮ್ಮ ಸಂವಿಧಾನ ಕಳೆದ ೭೫ ವರ್ಷದಿಂದ ದೇಶದ ಸರ್ವರ ಬೇಕು ಬೇಡಿಕೆಗಳನ್ನು ಪೂರೈಸಿದೆ. ಆದರಿಂದಲೇ ಸಂವಿಧಾನ ನಮ್ಮ ಹೆಮ್ಮೆ ಎನ್ನುತ್ತೇವೆ. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ನೀಡುವದು ಅಸಾಧ್ಯ ಎಂದು ವಿದೇಶಿಗರು ಹೇಳಿದ್ದರು. ನಮ್ಮ ದೇಶದ ಜನರನ್ನು, ಮುಖಂಡರನ್ನು ಲಘುವಾಗಿ ಕಾಣುತ್ತಿದ್ದರು. ಆದರೇ ನಾವುಗಳು ನಮ್ಮ ಸಂವಿಧಾನ ಸಾಮರ್ಥ್ಯ ಏನೆಂದು ಈಗ ಜಗತ್ತಿಗೆ ತೋರಿಸಿದ್ದೇವೆ. ಹಲವು ರಾಷ್ಟ್ರಗಳಿಗೆ ನಮ್ಮ ದೇಶ ಮಾದರಿಯಾಗಿದೆ. ನಮ್ಮ ದೇಶದ ಅಭಿವೃದ್ಧಿ ಗುರಿ ನೋಡಿ ನಿಬ್ಬೇರಗಾಗಿ ನೋಡುತ್ತಿದ್ದಾರೆ ಎಂದರು.
ಅನ್ಯ ದೇಶಗಳ ಆರ್ಥಿಕ ವ್ಯವಸ್ಥೆಗಿಂತ ನಮ್ಮ ದೇಶ ಉನ್ನತ ಸ್ಥಾನದಲ್ಲಿದ್ದೇವೆ. ಇದಕ್ಕೆ ಮೂಲ ಕಾರಣ ನಮ್ಮ ಸಂವಿಧಾನವಾಗಿದೆ. ಇದನ್ನು ನಾವೆಲ್ಲರೂ ಮರೆಯಬಾರದು. ಎಲ್ಲ ಜಾತಿ, ಧರ್ಮ, ಸಮುದಾಯ ಸರ್ವರನ್ನು ಒಳಗೊಂಡ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನವಾಗಿದೆ ಎಂದರು.ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಜನ್ಮ ಶತಮಾನೊತ್ಸವ ಅಂಗವಾಗಿ ವಿವಿ ಆವರಣದಲ್ಲಿ 1 ಲಕ್ಷ ಗಿಡ ನೇಡುವ ಮೂಲಕ ಅರಣ್ಯ ಮರು ಸೃಷ್ಠಿ ಪ್ರಯತ್ನ ಯಶಸ್ವಿಯಾಗಲಿ ಎಂದರು.
ಪ್ರವಾಸಿ ಮಿತ್ರರು ನಮ್ಮ ದೇಶದ ಇತಿಹಾಸ, ಮಹತ್ವ ಸಾರುವವರಾಗಿದ್ದಾರೆ. ಅವರು ವಿದೇಶಿಗಳಿಗೆ ನಮ್ಮ ಆಚಾರ ವಿಚಾರ, ಇತಿಹಾಸ ಸಂಸ್ಕೃತಿಗಳ ಪ್ರಚಾರಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವಾಸಿ ಮಿತ್ರರಿಗೆ ಸಮವಸ್ತ್ರ ವಿತರಿಸುವ ಬಗ್ಗೆ ಹಾಗೂ ಪ್ರವಾಸಿ ಮಿತ್ರರಿಗೆ ಗುರುತಿನ ಚೀಟಿ ನವೀಕರಣ ಜಿಲ್ಲಾಧಿಕಾರಿಗಳ ಹಂತದಲ್ಲಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಿವಿ ಪ್ರಭಾರಿ ಕುಲಪತಿ ಪ್ರೋ. ಸುರೇಶ ನಾಡಗೌಡರ ಮಾತನಾಡಿ, ದೇಶದಲ್ಲಿ ಯಾವುದೇ ಕಾನೂನು ರಚಿಸಿದರು ಅದು ಸಂವಿಧಾನದ ಆಶಯವಾಗಿ ಇರಬೇಕು. ಸಂವಿಧಾನ ನಮ್ಮೆಲ್ಲರಿಗು ಸಮಾನತೆ, ಮಾತನಾಡುವ ಸ್ವಾತಂತ್ರ್ಯ ನೀಡಿದೆ ಎಂದರು.
ಜಾನಪದ ವಿವಿ ಕುಲಪತಿ ಟಿ.ಎಂ. ಬಾಸ್ಕರ್ ಮಾತನಾಡಿ, ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಆರ್ಥಿಕ ಸಾಮಾಜಿಕ ರಾಜಕೀಯ ಸಮಾನತೆ ನೀಡಿದೆ, ಸಂವಿಧಾನದ ಕಾರ್ಯಾಂಗ,ನ್ಯಾಯಾಂಗ, ಶಾಸಕಾಂಗ ಸೇರಿದಂತೆ ಪತ್ರಿಕಾಂಗ ಸಮರ್ಥವಾಗಿ ಕಾರ್ಯನಿರ್ವಹಿಸಿ ದೇಶದ ಸ್ಥಿರ ಅಭಿವೃದ್ಧಿಗೆ ಸಹಕಾರವಾಗಿವೆ. ಸಾರ್ವಜನಿಕರು ಪೂರ್ವಾ ಪೀಡಿತ ಆಲೋಚನೆಗಳಿಂದ ದೂರ ಸರಿದು ದೂರ ದೃಷ್ಟಿಯ ಆಲೋಚನೆ ಪ್ರಾರಂಭಿಸಿ, ದೇಶದ ವಿಜ್ಞಾನ ತಂತ್ರಜ್ಞಾನ ಶೈಕ್ಷಣಿಕ, ಆರ್ಥಿಕವಾಗಿ ಸಬಲವಾಗಬೇಕು ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಓದಿ ತಿಳಿದುಕೊಳ್ಳಬೇಕು ಎಂದರು.