ಮೂಲ್ಕಿ: ಅಂತಾರಾಷ್ಟ್ರೀಯ ವಾಸ್ತು ತಜ್ಞ, ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಜನ್ಮ ದಿನಾಚರಣೆಯ ಪ್ರಯುಕ್ತ ಅವರ ಹುಟ್ಟೂರು ಮೂಲ್ಕಿಯಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಮೂಲಕ ವಿಭಿನ್ನ ರೀತಿಯಲ್ಲಿ ಅನೇಕ ಸೇವಾ ಕಾರ್ಯಕ್ರಮಗಳು ನಡೆಯಿತು.
ಸ್ವಾಮೀಜಿ ಅವರ ಬೆಂಗಳೂರು ಮತ್ತು ಮೂಲ್ಕಿಯ ಆಶ್ರಮದ ಮೂಲಕ ವಿವಿಧ ಸಾಮಾಜಿಕ ಕಾರ್ಯ ನಡೆದವು. ಸ್ವಾಮೀಜಿ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಚಟುವಟಿಕೆಯೊಂದಿಗೆ ಆಚರಿಸುವ ಉದ್ದೇಶದಿಂದ ಅವರ ಭಕ್ತರು ಹಾಗೂ ಅಭಿಮಾನಿಗಳು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿದರು. ಮೂಲ್ಕಿ ಸಿಎಸ್ಐ ಬಾಲಿಕಾಶ್ರಮಕ್ಕೆ ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷಿನ್) ನೀಡಲಾಯಿತು. ಬೆಂಗಳೂರಿನ ವಿಶೇಷ ಚೇತನ ಮಕ್ಕಳ ಶಾಲೆ ಹಾಗೂ ವೃದ್ಧಾಶ್ರಮಕ್ಕೆ, ಶ್ರಮಿಕರು, ದುರ್ಬಲ ವರ್ಗ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ನೆರವು, ನಿರಂತರ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಡವರ್ಗದವರಿಗೆ ಉಚಿತ ಕೊಡುಗೆ ನೀಡಲಾಯಿತು. ಉಡುಪಿಯಲ್ಲಿ ಆಶ್ರಮದ ಸೇವಾ ಭಕ್ತರಾದ ಸಾಧಿಕ್ ಅಹಮದ್ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸಾಮಾಜಿಕ ಕಾರ್ಯಕರ್ತ ಆಶ್ರಮ ಸೇವಾ ಭಕ್ತರಾದ ಶರತ್ ಕಾರ್ನಾಡ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಸುವರ್ಣ, ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್, ಪತ್ರಕರ್ತ ಹರೀಶ್ ಹೆಜ್ಮಾಡಿ, ಜೈ ತುಳುನಾಡ್ ಸಂಘಟನೆಯ ಉದಯ ಪೂಂಜ, ದಿನೇಶ್ ಶೆಟ್ಟಿ ಬೆಳ್ತಂಗಡಿ, ಪತ್ರಕರ್ತ ಗಣೇಶ್ ಪಂಜ ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ವಕ್ತಾರ ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು. ಮೂಲ್ಕಿ ಸಿಎಸ್ಐ ಬಾಲಕಾಶ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿ ಹುಟ್ಟುಹಬ್ಬ:ಮೂಲ್ಕಿ ಸಿಎಸ್ಐ ಬಾಲಕಾಶ್ರಮದಲ್ಲಿ ಜರಗಿದ ಶ್ರೀ ಚಂದ್ರಶೇಖರ ಸ್ವಾಮೀಜಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಪು ಪ್ರೆಸ್‌ಕ್ಲಬ್ ಮಾಜಿ ಅಧ್ಯಕ್ಷ ಹರೀಶ್ ಹೆಜ್ಜಾಡಿ ಅಂತಾರಾಷ್ಟ್ರೀಯ ವಾಸ್ತು ತಜ್ಞ ಆಧ್ಯಾತ್ಮಿಕ ಗುರು ಚಂದ್ರಶೇಖರ ಸ್ವಾಮೀಜಿ ಸಾಧನೆ ಅದ್ವಿತೀಯವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಅವರು ಮೂಲ್ಕಿಯ ಮಗನಾಗಿದ್ದು. ನಾನಾ ದೇಶಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜರಿಗೆ ಗುರುಗಳಾಗಿದ್ದು, ಅವರ ಹೆಸರಿನಲ್ಲಿ ನಡೆಯುವ ನಿರಂತರ ಸಾಮಾಜಿಕ ಚಟುವಟಿಕೆಗಳು, ಸಾಧಕರನ್ನು ಗುರುತಿಸಿ ಗೌರವಿಸುವಿಕೆ ಅಭಿನಂದನೀಯವೆಂದು ಹೇಳಿದರು.
ಹಳೆಯಂಗಡಿ ಪಿಸಿಎ ಬ್ಯಾಂಕ್ ನಿರ್ದೇಶಕ ಧರ್ಮಾನಂದ ಶೆಟ್ಟಿಗಾರ್ ಮಾತನಾಡಿ ಚಂದ್ರಶೇಖರ ಸ್ವಾಮೀಜಿ ವ್ಯಕ್ತಿಯಲ್ಲ, ಶಕ್ತಿಯಾಗಿದ್ದು, ಸಮಾಜದಲ್ಲಿ ದುರ್ಬಲ ಹಾಗೂ ಅಸಹಾಯಕರನ್ನು ಗುರುತಿಸಿ ಸಹಾಯ ಹಸ್ತದ ಮೂಲಕ ಮಾದರಿಯಾಗಿದ್ದಾರೆಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಮಾತನಾಡಿ ಚಂದ್ರಶೇಖರ ಸ್ವಾಮೀಜಿ ಅವರು ಸೇವಾ ಚಟುವಟಿಕೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದು ಅವರ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ ಎಂದರು.ಚಂದ್ರಶೇಖರ ಸ್ವಾಮೀಜಿ ಅಶ್ರಮ ಸಂಚಾಲಕ ಪುನೀತ್‌ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಜೈ ತುಳುನಾಡು ಸಂಘಟನೆಯ ಉದಯ ಪೂಂಜ, ಮಿಥುನ್ , ದಿನೇಶ್ ಶೆಟ್ಟಿ, ಸಿಎಸ್ಐ ಬಾಲಿಕಾಶ್ರಮದ ವಾರ್ಡನ್ ಶಾಂತಿ ಮತ್ತಿತರರು ಇದ್ದರು.ಆಶ್ರಮದ ವಕ್ತಾರ ನರೇಂದ್ರ ಕೆರೆಕಾಡು ಚಂದ್ರಶೇಖರ ಸ್ವಾಮೀಜಿ ಕುರಿತು ಪ್ರಸ್ತಾವಿಕ ಮಾತನಾಡಿದರು. ಮೂಲ್ಕಿ ಸಿಎಸ್ಐ ಬಾಲಿಕಾಶ್ರಮಕ್ಕೆ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್) ನೀಡಲಾಯಿತು ಹಾಗೂ ವಿದ್ಯಾರ್ಥಿನಿಯರಿಗೆ ಪಠ್ಯ ಪರಿಕರ ಕೊಡುಗೆಗಳನ್ನು ವಿತರಿಸಲಾಯಿತು.