ಆರೇ ತಿಂಗಳಲ್ಲಿ ಕಿತ್ತು ಬರುತ್ತಿರುವ ಸಿಮೆಂಟ್ ರಸ್ತೆ..!

KannadaprabhaNewsNetwork |  
Published : May 20, 2026, 12:15 AM IST
೧೯ಕೆಎಂಎನ್‌ಡಿ-೧, ೨ಚಿಕ್ಕಮಂಡ್ಯದಿಂದ ಬಿ.ಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಿಮೆಂಟ್ ಕಿತ್ತುಬಂದಿರುವ ದೃಶ್ಯ. | Kannada Prabha

ಸಾರಾಂಶ

ಅಭಿವೃದ್ಧಿಯ ಸಂಕೇತವಾಗಿರಬೇಕಿದ್ದ ರಸ್ತೆಗಳು ಕೆಲವೊಮ್ಮೆ ಕಳಪೆ ಕಾಮಗಾರಿಯಿಂದ ಪ್ರಗತಿಯ ಅಧಃಪತನವನ್ನು ಸಾಕ್ಷೀಕರಿಸುತ್ತವೆ. ಅಂತಹ ರಸ್ತೆಗಳಲ್ಲಿ ಚಿಕ್ಕಮಂಡ್ಯದಿಂದ ಬಿ.ಹೊಸಹಳ್ಳಿ ಸಂಪರ್ಕ ರಸ್ತೆಯೂ ಒಂದಾಗಿದೆ. ರಸ್ತೆ ನಿರ್ಮಾಣವಾಗಿ ಆರು ತಿಂಗಳಾಗಿಲ್ಲ. ಆಗಲೇ ಜಲ್ಲಿಕಲ್ಲುಗಳು ಮೇಲೇಳುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಭಿವೃದ್ಧಿಯ ಸಂಕೇತವಾಗಿರಬೇಕಿದ್ದ ರಸ್ತೆಗಳು ಕೆಲವೊಮ್ಮೆ ಕಳಪೆ ಕಾಮಗಾರಿಯಿಂದ ಪ್ರಗತಿಯ ಅಧಃಪತನವನ್ನು ಸಾಕ್ಷೀಕರಿಸುತ್ತವೆ. ಅಂತಹ ರಸ್ತೆಗಳಲ್ಲಿ ಚಿಕ್ಕಮಂಡ್ಯದಿಂದ ಬಿ.ಹೊಸಹಳ್ಳಿ ಸಂಪರ್ಕ ರಸ್ತೆಯೂ ಒಂದಾಗಿದೆ. ರಸ್ತೆ ನಿರ್ಮಾಣವಾಗಿ ಆರು ತಿಂಗಳಾಗಿಲ್ಲ. ಆಗಲೇ ಜಲ್ಲಿಕಲ್ಲುಗಳು ಮೇಲೇಳುತ್ತಿವೆ. ಇಡೀ ರಸ್ತೆ ಧೂಳುಮಯವಾಗಿದ್ದು, ಸ್ಥಳೀಯರು ರಸ್ತೆ ನಿರ್ಮಿಸಿದ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಸುಮಾರು ೪೦೦ ರಿಂದ ೫೦೦ ಮೀಟರ್ ಉದ್ದದ ರಸ್ತೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳು ಬೇಕಾಬಿಟ್ಟಿ ಕಾಮಗಾರಿ ನಡೆಸಿರುವುದರಿಂದ ಸ್ಥಳೀಯ ನಿವಾಸಿಗಳು ನಿತ್ಯ ರೋಧನ ಅನುಭವಿಸುತ್ತಿದ್ದಾರೆ. ಮನೆಯ ಬಾಗಿಲು ತೆರೆಯಲಾಗದಂತೆ ಇಲ್ಲಿ ಧೂಳು ಮೇಲೇಳುತ್ತಿದೆ. ಬಾಗಿಲು ತೆರೆದರೆ ರಸ್ತೆಯ ಧೂಳೆಲ್ಲವೂ ಮನೆಯನ್ನು ತುಂಬಿಕೊಳ್ಳುತ್ತದೆ. ಮನೆಯನ್ನು ಸ್ವಚ್ಛಗೊಳಿಸುವುದೇ ದೊಡ್ಡ ಕೆಲಸವಾಗಿದೆ. ಧೂಳಿನಿಂದ ವೃದ್ಧರು, ಮಕ್ಕಳು ಅಲರ್ಜಿ, ಕೆಮ್ಮಿನಿಂದ ಬಳಲುತ್ತಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ.

ಮೂರೇ ದಿನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರೈಸಿದ್ದಾರೆ. ಒಂದು ದಿನ ಜಲ್ಲಿ ತಂದು ಸುರಿದರು. ಇನ್ನೊಂದು ದಿನ ಅದನ್ನು ಮಟ್ಟ ಮಾಡಿದರು. ಎರಡು ತಿಂಗಳ ಬಳಿಕ ಕಾಂಕ್ರೀಟ್ ಸುರಿದು ತಟ್ಟಿ ಹೋದರು. ಕಾಮಗಾರಿಗೆ ಬಳಸಿದ ಸಿಮೆಂಟ್ ಕಳಪೆಯದ್ದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಲ್ಲಿ ಬಿಚಾವಣೆ ಮಾಡುವ ಸಂದರ್ಭದಲ್ಲೇ ೨೦೦ರಿಂದ ೩೦೦ ಮೂಟೆ ಸಿಮೆಂಟ್ ತಂದಿರಿಸಿಕೊಂಡಿದ್ದರು. ಮಳೆಯಿಂದ ರಕ್ಷಿಸಲು ಟಾರ್ಪಾಲು ಹಾಕಿದ್ದರು. ೨ ತಿಂಗಳಾದರೂ ಕಾಮಗಾರಿ ನಡೆಸಿರಲಿಲ್ಲ. ಕೊನೆಗೆ ಮಳೆ ಬಂದು ಸಿಮೆಂಟ್ ಒದ್ದೆಯಾಗಿತ್ತು. ನೀರಲ್ಲಿ ನೆನೆದು ಗಟ್ಟಿಯಾಗಿದ್ದ ಸಿಮೆಂಟ್‌ನ್ನೇ ಒಡೆದು ರಸ್ತೆಗೆ ಹಾಕಿ ಹೋದರು. ನೀರಿನಿಂದ ರಸ್ತೆಯನ್ನು ಸರಿಯಾಗಿ ಕ್ಯೂರಿಂಗ್ ಕೂಡ ಮಾಡಲಿಲ್ಲ. ಕಬ್ಬಿನ ತರಗು, ಹುಲ್ಲು ಹಾಕಿ ನೀರನ್ನು ಕಟ್ಟಲಿಲ್ಲ. ಈಗ ನೋಡಿದರೆ ಸಿಮೆಂಟೆಲ್ಲವೂ ಮರಳಿನ ಸಮೇತ ಮೇಲೆದ್ದು ಬರುತ್ತಿದೆ. ಜಲ್ಲಿ ಕಲ್ಲುಗಳೂ ಮೇಲೇಳಲಾರಂಭಿಸಿವೆ ಎಂದು ಸ್ಥಳೀಯರಾದ ಮಾದಶೆಟ್ಟಿ ಆರೋಪಿಸಿದರು.

ಸಿಮೆಂಟ್ ರಸ್ತೆ ಮಾಡಿ ಹೋದ ಕೆಆರ್‌ಐಡಿಎಲ್ ಅಧಿಕಾರಿಗಳು ಮತ್ತೆ ಆ ರಸ್ತೆ ಹೇಗಿದೆ ಎಂದು ಅತ್ತ ತಿರುಗಿಯೂ ನೋಡಿಲ್ಲ. ಅಧಿಕಾರಿಗಳು ಬರುವುದನ್ನೇ ಸ್ಥಳೀಯರೂ ಕೂಡ ಎದುರುನೋಡುತ್ತಿದ್ದಾರೆ. ರಸ್ತೆ ನಿರ್ಮಾಣ ಹೆಸರಿನಲ್ಲಿ ಲಕ್ಷಾಂತರ ರು. ವೆಚ್ಚ ಮಾಡಿ ಬಿಲ್ ಮಾಡಿಕೊಂಡಿರುವ ಕೆಆರ್‌ಐಡಿಎಲ್ ಅಧಿಕಾರಿಗಳು ಕಳಪೆ ಕಾಮಗಾರಿ ನಡೆಸಿರುವುದರ ವಿರುದ್ಧ ಸ್ಥಳೀಯ ಜನರು ಅದರಲ್ಲೂ ಮಹಿಳೆಯರು ಕೆಂಡಕಾರುತ್ತಿದ್ದಾರೆ.

ಈಗಾಗಲೇ ಒಮ್ಮೆ ಸ್ಥಳೀಯರು ಅವ್ಯವಸ್ಥಿತ ರಸ್ತೆ ಕಾಮಗಾರಿಯನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ರಸ್ತೆಯನ್ನು ಏತಕ್ಕಾದರೂ ಮಾಡಬೇಕು. ಮೊದಲೇ ರಸ್ತೆ ಎಷ್ಟೋ ಚೆನ್ನಾಗಿತ್ತು. ಸಿಮೆಂಟ್ ರಸ್ತೆ ಮಾಡುವುದಾಗಿ ಹೇಳಿ ಅದ್ವಾನ ಮಾಡಿದ್ದಾರೆ. ಪಂಚಾಯಿತಿಯವರನ್ನು ಕೇಳಿದರೆ ಈ ರಸ್ತೆಯನ್ನು ನಾವು ಮಾಡಿಲ್ಲ. ಕೆಆರ್‌ಐಡಿಎಲ್ ಅಧಿಕಾರಿಗಳು ಮಾಡಿರೋದು ಅವರನ್ನೇ ಕೇಳಿಹೋಗಿ ಎನ್ನುತ್ತಾರೆ. ಯಾರ ಬಳಿ ನಮ್ಮ ಕಷ್ಟ ಹೇಳೋದು ಎನ್ನುವುದು ಸ್ಥಳೀಯ ನಿವಾಸಿಗಳ ಆಕ್ರೋಶದ ಮಾತಾಗಿದೆ.

ಇಂತಹ ರಸ್ತೆ ಯಾಕೆ ಮಾಡಬೇಕಿತ್ತು. ಸಿಮೆಂಟ್ ರಸ್ತೆ ಮಾಡಿ ಅದ್ವಾನ ಮಾಡಿದ್ದಾರೆ. ಗುಣಮಟ್ಟದ ಸಿಮೆಂಟ್ ಬಳಸದೆ, ಸರಿಯಾಗಿ ಕ್ಯೂರಿಂಗ್ ಮಾಡದೆ ಸಿಮೆಂಟ್-ಮರಳೆಲ್ಲವೂ ಮೇಲೆದ್ದಿದೆ. ಜಲ್ಲಿ ಕಲ್ಲುಗಳೂ ಕಿತ್ತುಬರುತ್ತಿವೆ. ವಾಹನಗಳು ಓಡಾಡಿದರೆ ಮನೆಗಳಿಗೆ ಧೂಳು ಆವರಿಸುತ್ತದೆ. ರಸ್ತೆ ಅವಸ್ಥೆಯನ್ನು ಯಾರೂ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ.

- ಮಾದಶೆಟ್ಟಿ, ಸ್ಥಳೀಯ ನಿವಾಸಿ, ಚಿಕ್ಕಮಂಡ್ಯ

ಹೆಂಗಸರಿಗೆ ಮಾಡಲು ಕೆಲಸವಿಲ್ಲ ಅಂತ ಧೂಳು ರಸ್ತೆಯನ್ನು ಮಾಡಿ ಹೋಗಿದ್ದಾರೆ. ರಸ್ತೆಯಿಂದ ಮೇಲೇಳುವ ಧೂಳನ್ನು ಸ್ವಚ್ಛಗೊಳಿಸುವುದು ನಮ್ಮ ಕರ್ಮವಾಗಿದೆ. ಮನೆಯ ಬಾಗಿಲನ್ನು ಯಾವಾಗಲೂ ಮುಚ್ಚಿರಲೇಬೇಕು. ತೆರೆದರೆ ಧೂಳು ತುಂಬಿಕೊಳ್ಳುತ್ತದೆ. ಅಧಿಕಾರಿಗಳೇನೋ ಬೇಕಾಬಿಟ್ಟಿ ಕಾಮಗಾರಿ ನಡೆಸಿ ಹೋಗಿದ್ದಾರೆ. ಕಷ್ಟ ಅನುಭವಿಸುತ್ತಿರುವವರು ಮಾತ್ರ ನಾವು.

- ಲಕ್ಷ್ಮಮ್ಮ, ಸ್ಥಳೀಯ ನಿವಾಸಿ, ಚಿಕ್ಕಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ್ಲಮ್ಮಳ ಆದರ್ಶಗಳು ಎಂದಿಗೂ ಪ್ರಸ್ತುತ: ಜಿ.ಜಿ. ಗೌಡಪ್ಪಗೋಳ
ಬಸವ ತತ್ವವೇ ಉಸಿರಾಗಿಸಿಕೊಂಡ ಡಾ.ಮಹಾಂತ ಶ್ರೀಗಳು: ಸಿದ್ದು ಯಾಪಲಪರ್ವಿ