ಗಣತಿಗೆ ನಿತ್ಯವೂ ಸಮಸ್ಯೆ: ಸಂಪುಟ ಸಭೆಯಲ್ಲಿ ಚರ್ಚೆ

KannadaprabhaNewsNetwork |  
Published : Sep 26, 2025, 01:00 AM IST
ಸರ್ವೇ. | Kannada Prabha

ಸಾರಾಂಶ

ಗಣತಿಗೆ ನಿತ್ಯವೂ ಸಮಸ್ಯೆ ಬಗ್ಗೆ ಶುಕ್ರವಾರದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಸೆ.22 ರಿಂದ ಶುರುವಾಗಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ (ಜಾತಿಗಣತಿ) ಸರ್ವರ್‌ ಸಮಸ್ಯೆ, ಆ್ಯಪ್‌ನಲ್ಲಿನ ಲೋಪದೋಷ, ಗಣತಿದಾರರ ನಿರ್ಲಕ್ಷ್ಯದಿಂದ ಹಿನ್ನಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿಯಲ್ಲಿ ಉಂಟಾಗುತ್ತಿರುವ ಗೊಂದಲ, ಲೋಪಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಸೆ.22 ರಿಂದ ಶುರುವಾಗಿರುವ ಸಮೀಕ್ಷೆಯಲ್ಲಿ ನಾಲ್ಕು ದಿನಗಳಾದರೂ ಸಮಸ್ಯೆಗಳು ಸಂಪೂರ್ಣ ಬಗೆಹರಿದಿಲ್ಲ. ಸಮೀಕ್ಷೆ ಟೇಕಾಫ್‌ ಆಗಿಲ್ಲ. ಈ ರೀತಿ ಆದರೆ ಅ.7ರ ವೇಳೆಗೆ ಸಮೀಕ್ಷೆ ಮುಗಿಸುವುದು ಅಸಾಧ್ಯ. ಹೀಗಾಗಿ ಶುಕ್ರವಾರ ಬೆಳಗ್ಗೆ ಖುದ್ದು ವಿಡಿಯೋ ಸಂವಾದದ ಮೂಲಕ ಜಿಲ್ಲಾಧಿಕಾರಿಗಳು, ಜಿಪಂ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್‌, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ನಿರ್ದೇಶನ ನೀಡಲು ಶುಕ್ರವಾರ ಬೆಳಗ್ಗೆ 11.30 ಗಂಟೆಗೆ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಈ ವೇಳೆ ಸಮೀಕ್ಷೆಗೆ ವೇಗ ನೀಡುವಂತೆ ತಾಕೀತು ಮಾಡಲಿದ್ದಾರೆ ಎಂದು ತಿಳಿಸಿದರು.

ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ:

ಸಮೀಕ್ಷೆಗೆ ಇ-ಆಡಳಿತ ಇಲಾಖೆ ಸಮರ್ಪಕವಾಗಿ ಸಿದ್ಧತೆ ಮಾಡಿಕೊಂಡಿಲ್ಲ. ಮೊದಲ ದಿನವೇ ಸರ್ವರ್‌ ಸಮಸ್ಯೆ ಉಂಟಾಗಿದೆ. ಆಫ್‌ಲೈನ್‌ನಲ್ಲಿ ಸಮೀಕ್ಷೆಗೆ ಅವಕಾಶವಿಲ್ಲ. ಹೀಗಾಗಿ ನೆಟ್‌ವರ್ಕ್‌ ಇಲ್ಲದ ಕಡೆ ಸಮೀಕ್ಷೆಯೇ ನಡೆಸಲಾಗುತ್ತಿಲ್ಲ. ಇನ್ನು ಆ್ಯಪ್‌ನಲ್ಲಿ ಹಲವು ಲೋಪಗಳಿದ್ದು ಡೌನ್‌ಲೋಡ್‌, ಒಟಿಪಿಗೂ ಸಮಸ್ಯೆಯಾಗುತ್ತಿದೆ. ಇದನ್ನು ಕೂಡಲೇ ಬಗೆಹರಿಸದಿದ್ದರೆ ಜನ ಮತ್ತಷ್ಟು ಆಕ್ರೋಶಗೊಳ್ಳಲಿದ್ದಾರೆ ಎಂದು ಕೆಲ ಸಚಿವರು ಸಭೆ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

-ಬಾಕ್ಸ್-

ಗಣತಿಯಲ್ಲಿ ಭಾಗವಹಿಸದ

ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ

ಇದೇ ವೇಳೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಹ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಜವಾಬ್ದಾರಿ ನಿಭಾಯಿಸದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಇನ್ನು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಶಿಸ್ತುಕ್ರಮ ಮತ್ತು ದಂಡ ವಿಧಿಸುವ ಅಧಿಕಾರ ಹೊಂದಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ