ಕನ್ನಡಪ್ರಭ ವಾರ್ತೆ ಬೆಂಗಳೂರು
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಅಸಹಜ ಸಾವು, ಭೂ ಅಕ್ರಮಗಳ ಕುರಿತ ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಕೋರಿ ‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ ಗುರುವಾರ ಪ್ರತಿಭಟನೆ ನಡೆಸಿತು.ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಸಂಬಂಧ ನಡೆಸಿದ ‘ಬೃಹತ್ ನ್ಯಾಯ ಸಮಾವೇಶ’ದಲ್ಲಿ ಧರ್ಮಸ್ಥಳ ಗ್ರಾಮ ಮತ್ತು ಸುತ್ತಮತ್ತಲ ಠಾಣೆಗಳಲ್ಲಿ ದಾಖಲಾದ ಅಸಹಜ ಸಾವು, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ನಡೆದ ದೌರ್ಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ, ಸೌಜನ್ಯ ಕೊಲೆ, ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಎಸ್‌ಐಟಿಯಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಪ್ರಮುಖರು ಒತ್ತಾಯಿಸಿದರು.
ಸಾಹಿತಿ ಡಾ। ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ ಸೇರಿ ಎಲ್ಲರಿಗೂ ನ್ಯಾಯ ಸಿಗಬೇಕು. ಧರ್ಮಸ್ಥಳ ಗ್ರಾಮದಲ್ಲಿನ ಎಲ್ಲ ಘಟನೆಗಳಿಗೂ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನಾವು ಧರ್ಮ ಮತ್ತು ದೇವರ ವಿರುದ್ಧವಾಗಿ ಪ್ರಶ್ನಿಸುತ್ತಿಲ್ಲ. ಅತ್ಯಾಚಾರದ ವಿರುದ್ಧ ಪ್ರಶ್ನೆ ಮಾಡುತ್ತಿದ್ದೇವೆ ಎಂದರು.
ಧರ್ಮಸ್ಥಳ ದೌರ್ಜನ್ಯ ವಿರೋಧಿ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಮಾತನಾಡಿ, ಕಳ್ಳತನವಾದರೂ ಬರುವ ಎಫ್‌ಎಸ್‌ಎಲ್ ನವರು ಸೌಜನ್ಯ ಪ್ರಕರಣದಲ್ಲಿ ಮೃತ ದೇಹ ಬಿದ್ದರೂ ಸ್ಥಳಕ್ಕೆ ಬಂದಿರಲಿಲ್ಲ. ಯೂಟ್ಯೂಬರ್ ಸಮೀರ್ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲು ನಾಲ್ಕು ಎಫ್‌ಎಸ್‌ಎಲ್ ಅಧಿಕಾರಿಗಳು ಬಂದಿದ್ದರು. ಇದು ನಿಜವಾದ ಅತ್ಯಾಚಾರಿಗಳನ್ನು ರಕ್ಷಿಸುವ ಷಡ್ಯಂತ್ರವಲ್ಲದೆ ಬೇರೆನು ಎಂದು ಪ್ರಶ್ನಿಸಿದರು.ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬೇಕಿದೆ. ಧರ್ಮಸ್ಥಳದ ಹೋರಾಟದ ಹಿಂದೆ ಕಮ್ಯುನಿಸ್ಟರಿದ್ದಾರೆ ಎಂದು ಬಲಪಂಥೀಯರು ಹೇಳುತ್ತಿದ್ದಾರೆ. ನಾವು ಹಿಂದಿಲ್ಲ, ಹೋರಾಟದಲ್ಲಿ ಮುಂದೆ ಇದ್ದೇವೆ ಎಂದು ಹೇಳಿದರು.
ಸಮಾವೇಶ ಉದ್ಘಾಟಿಸಿದ ಮಾಜಿ ಸಂಸದೆ, ಕಮ್ಯುನಿಸ್ಟ್ ನಾಯಕಿ ಸುಭಾಷಿಣಿ ಅಲಿ ಮಾತನಾಡಿ, ಧರ್ಮಸ್ಥಳದ ಹೋರಾಟ ವ್ಯವಸ್ಥೆಯ ವಿರುದ್ಧದ ಹೋರಾಟವಾಗಿದೆ. ವೇದವಲ್ಲಿ, ಪದ್ಮಲತಾ ಮತ್ತು ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆಗಳಂತಹ ಬರ್ಬರ ಕೃತ್ಯಗಳಿಗೆ ನ್ಯಾಯ ಒದಗಿಸಬೇಕು ಹಾಗೂ ನೂರಾರು ಕುಟುಂಬಗಳು ನಲುಗಿರುವ ಈ ಪ್ರದೇಶದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಿದೆ ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್, ವಕೀಲ ಬಾಲನ್, ಸೂರ್ಯ ಮುಕುಂದರಾಜ್, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಹೋರಾಟಗಾರ ಸಿದ್ದನಗೌಡ ಪಾಟೀಲ್, ಕೆ.ನೀಲಾ, ಕೆ.ಎಸ್.ವಿಮಲಾ, ಡಾ.ಕೆ.ಪ್ರಕಾಶ್ ಮತ್ತಿತರರು ಮಾತನಾಡಿದರು. ವೇದವಲ್ಲಿ ಮತ್ತು ಪದ್ಮಲತಾ ಕುಟುಂಬಸ್ಥರು ಸೇರಿ ಸಾವಿರಾರು ಹೋರಾಟಗಾರರು ಭಾಗಿಯಾಗಿದ್ದರು.