ಮೈಸೂರಲ್ಲಿ ಭೈರಪ್ಪನವರ ಸ್ಮಾರಕ: ಸಿಎಂ

KannadaprabhaNewsNetwork |  
Published : Sep 26, 2025, 01:00 AM IST
ಬೈರಪ್ಪಗೆ ಸಿದ್ದು ನಮನ. | Kannada Prabha

ಸಾರಾಂಶ

ಪದ್ಮಭೂಷಣ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪನವರ ಸ್ಮಾರಕವನ್ನು ಅವರ ಕರ್ಮ ಕ್ಷೇತ್ರ ಮೈಸೂರಿನಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

 ಬೆಂಗಳೂರು/ಮೈಸೂರು :  ಪದ್ಮಭೂಷಣ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪನವರ ಸ್ಮಾರಕವನ್ನು ಅವರ ಕರ್ಮ ಕ್ಷೇತ್ರ ಮೈಸೂರಿನಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬುಧವಾರ ನಿಧನರಾದ ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ಸಣ್ಣ ಹಳ್ಳಿಯಲ್ಲಿ ಹುಟ್ಟಿ, ಕಷ್ಟದಿಂದ ಮೇಲೆ ಬಂದ ಅವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದಾರೆ. ಮೈಸೂರಿನಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ. ಮೈಸೂರು ಅವರ ಕರ್ಮ ಕ್ಷೇತ್ರವಾಗಿತ್ತು. ಅವರ ಹೆಸರಿನಲ್ಲಿ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಭೈರಪ್ಪನವರು ನಾಡು ಕಂಡ ಶ್ರೇಷ್ಠ ಸಾಹಿತಿ. ಯಾವುದೇ ಪ್ರಶಸ್ತಿಗೂ ಹಂಬಲಿಸದ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಬೇಕಿತ್ತು ಎಂದು ಮುಖ್ಯಮಂತ್ರಿ ಹೇಳಿದರು.

ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆ ಆಗಿರುವುದು ಅಪರೂಪ. ಕನ್ನಡ ಮಾತ್ರವಲ್ಲದೆ ಅನೇಕ ಭಾಷೆಗಳು, ವಿದೇಶಗಳಲ್ಲೂ ಓದುಗ ಅಭಿಮಾನಿಗಳಲ್ಲಿ ಸಂಪಾದಿಸಿದ್ದರು. ಬೋಧನೆ ಮಾಡುತ್ತಲೇ ಸಾಹಿತ್ಯ ಕೃಷಿ ಆರಂಭಿಸಿದರು. ಎರಡೂ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಿದರು. ನಮ್ಮಿಬ್ಬರ ದೃಷ್ಟಿಕೋನಗಳು ಬೇರೆಯಾಗಿದ್ದರೂ ನನ್ನ ಮತ್ತು ಅವರ ನಡುವೆ ಒಡನಾಟವಿತ್ತು. ಭೈರಪ್ಪನವರ ಅಗಲಿಕೆಯಿಂದ ಸಾರಸ್ವತ ಲೋಕ ಬಡವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿವೆ. ಕೆಲ ಕಾದಂಬರಿಗಳನ್ನು ಓದಿದ್ದೇನೆ. ಅವರ ಬದುಕಿನ ಅನುಭವಗಳನ್ನಾಧರಿಸಿ ಕಾದಂಬರಿ ರಚಿಸಲಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರು, ಸಾಹಿತ್ಯಾಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು. 

ಇಂದು ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಅಂತ್ಯಕ್ರಿಯೆ:ಮೈಸೂರು: ಹೃದಯಾಘಾತದಿಂದ ಬುಧವಾರ ಬೆಂಗಳೂರಿನಲ್ಲಿ ನಿಧನರಾದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅವರ ಪಾರ್ಥೀವ ಶರೀರವನ್ನು ಗುರುವಾರ ಮೈಸೂರಿಗೆ ತರಲಾಗಿದ್ದು, ನಗರದ ಕಲಾಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿಟ್ಟು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ, ಸಂಜೆ, ನಗರದ ಜೆಎಸ್‌ಎಸ್ ಆಸ್ಪತ್ರೆಯ ಕೋಲ್ಡ್‌ ಸ್ಟೋರೇಜ್‌ ಗೆ ರವಾನಿಸಲಾಗಿದೆ. ಶುಕ್ರವಾರ ಬೆಳಗ್ಗೆ 8.30ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆದು, ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.

 ಗಣ್ಯರಿಂದ ಅಂತಿಮ ದರ್ಶನ:ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೈಸೂರಿಗೆ ಆಗಮಿಸಿದ ಪಾರ್ಥೀವ ಶರೀರವನ್ನು ಕಲಾಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಈ ವೇಳೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಶಾಸಕರಾದ ಜಿ.ಟಿ. ದೇವೇಗೌಡ ಸೇರಿ ಹಲವು ಗಣ್ಯರು ಆಗಮಿಸಿ, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ರಂಗಾಯಣ ಆವರಣ ಸೇರಿದಂತೆ ಕಿಂದರಿಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಅಭಿಮಾನಿಗಳು ಜಮಾಯಿಸಿದ್ದರು. ಪಾರ್ಥೀವ ಶರೀರವಿದ್ದ ವಾಹನವು ಕಲಾಮಂದಿರ ಆವರಣ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಪುಷ್ಪವೃಷ್ಟಿಗರೆದು ಕಂಬನಿ ಮಿಡಿದರು. ಭೈರಪ್ಪ ಅವರ ನಿಧನದಿಂದಾಗಿ ಕಲಾಮಂದಿರ ಆವರಣದಲ್ಲಿ ನೀರವ ಮೌನ ಆವರಿಸಿತ್ತು. ಭೈರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಕಲಾಮಂದಿರದಲ್ಲಿ ಆಯೋಜಿಸಿದ್ದ ನಾಟಕದ ಸಮಯವನ್ನು ಬದಲಿಸಲಾಗಿತ್ತು. ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಸಂಚಾರಕ್ಕೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದರು.ಬಳಿಕ, ಸಂಜೆ 6 ಗಂಟೆ ವೇಳೆಗೆ, ಪಾರ್ಥಿವ ಶರೀರವನ್ನು ನಗರದ ಜೆಎಸ್‌ಎಸ್ ಆಸ್ಪತ್ರೆಯ ಕೋಲ್ಡ್‌ ಸ್ಟೋರೇಜ್‌ ಗೆ ರವಾನಿಸಲಾಯಿತು.

ಇಂದು ಅಂತ್ಯಕ್ರೀಯೆ:ಶುಕ್ರವಾರ ಬೆಳಗ್ಗೆ 8 ಗಂಟೆಗೆ ಜೆಎಸ್‌ಎಸ್ ಆಸ್ಪತ್ರೆಯ ಕೋಲ್ಡ್‌ ಸ್ಟೋರೇಜ್‌ ನಿಂದ ಪಾರ್ಥೀವ ಶರೀರವನ್ನು ಅವರ ಮನೆಗೆ ತರಲಾಗುವುದು. ಅಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಬಳಿಕ, ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಮಕ್ಕಳಿಬ್ಬರಿಂದ ಅಂತ್ಯಕ್ರಿಯೆ ಮಾಡದಂತೆ ಬೈರಪ್ಪ ವಿಲ್‌:ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ನಡೆಸುವಂತಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರು ವಿಲ್‌ ಮಾಡಿದ್ದಾರೆ. ಅವರ ಕೊನೆಯ ಆಸೆಯಂತೆ ಮಕ್ಕಳು ಅಂತ್ಯಕ್ರಿಯೆ ನಡೆಸಬಾರದು ಎಂದು ಅಭಿಮಾನಿಯೊಬ್ಬ ವಿಲ್‌ ಪ್ರತಿ ಹಿಡಿದು ಪ್ರತಿಭಟಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 

ಭೈರಪ್ಪ ಅವರ ಅಭಿಮಾನಿ ಎನ್ನಲಾದ ಫಣೀಶ್ ಎಂಬುವರು ವಿಲ್‌ ಕಾಪಿ ಪ್ರದರ್ಶಿಸಿದರು. ಇದರಿಂದಾಗಿ ಕಲಾಮಂದಿರದ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ವಿಲ್ ನಲ್ಲಿ ಭೈರಪ್ಪ ಅವರು ತಮ್ಮ ಮಕ್ಕಳು ಅಂತ್ಯಸಂಸ್ಕಾರ ಮಾಡಬಾರದು ಅಂತ ಬರೆದಿದ್ದಾರೆ. ಹಾಗಾಗಿ, ಅವರ ಮಕ್ಕಳು ಅಂತ್ಯಸಂಸ್ಕಾರ ಮಾಡಬಾರದು. ಅವರನ್ನು ನೋಡಿಕೊಂಡ ಹೆಣ್ಣು ಮಗಳೇ ಅಂತಿಮ ಸಂಸ್ಕಾರ ಮಾಡಬೇಕು. ಅವರ ಆಸೆ ಕೂಡ ಅದೆ. ಅವರ ಕೊನೆ ಆಸೆ ಈಡೇರಬೇಕು ಎಂದು ಅವರು ಪಟ್ಟು ಹಿಡಿದರು. ಕಡೆಗೆ ಪೊಲೀಸರು ಅವರನ್ನು ಅಲ್ಲಿಂದ ಕರೆದೊಯ್ದರು.

PREV
Read more Articles on

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ