ಚಿರನಿದ್ರೆಗೆ ಜಾರಿದ ಶತಾಯುಷಿ ಭೀಮಣ್ಣ ಖಂಡ್ರೆ

KannadaprabhaNewsNetwork |  
Published : Jan 18, 2026, 02:30 AM IST
ಚಿತ್ರ 17ಬಿಡಿಆರ್‌1000ಭಾಲ್ಲಿಯಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಅಂತಿಮಯಾತ್ರೆಯ ಸಂದರ್ಭ ಅವರ ಪಾರ್ಥಿವ ಶರೀರಕ್ಕೆ ಜೆಸಿಬಿ ಮೇಲಿಂದ ಪುಷ್ಪವೃಷ್ಟಿ  ಮಾಡಿದ  ಅಭಿಮಾನಿಗಳು.  | Kannada Prabha

ಸಾರಾಂಶ

ವಯೋಸಹಜ ಕಾಯಿಲೆಯಿಂದ ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಶತಾಯುಷಿ, ಅಖಿಲ ಭಾರತ ವೀರಶೈವ ಮಹಾಸಭೆಯ ಗೌರವಾಧ್ಯಕ್ಷ, ಕಾಂಗ್ರೆಸ್ ಮಾಜಿ ಸಚಿವ ಭೀಮಣ್ಣ ಖಂಡ್ರೆ (103) ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ವೀರಶೈವ ಲಿಂಗಾಯತ ವಿಧಿವಿಧಾನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಭಾಲ್ಕಿ (ಬೀದರ್)

ವಯೋಸಹಜ ಕಾಯಿಲೆಯಿಂದ ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಶತಾಯುಷಿ, ಅಖಿಲ ಭಾರತ ವೀರಶೈವ ಮಹಾಸಭೆಯ ಗೌರವಾಧ್ಯಕ್ಷ, ಕಾಂಗ್ರೆಸ್ ಮಾಜಿ ಸಚಿವ ಭೀಮಣ್ಣ ಖಂಡ್ರೆ (103) ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ವೀರಶೈವ ಲಿಂಗಾಯತ ವಿಧಿವಿಧಾನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.ಸ್ವಗೃಹದಲ್ಲಿಯೇ ಲಿಂಗೈಕ್ಯರಾದ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ಅವರ ನಿವಾಸದ ಪಕ್ಕದ ಮೈದಾನದಲ್ಲಿ ಇರಿಸಲಾಗಿತ್ತು. ಈ ವೇಳೆ ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಬಳಿಕ ಮಧ್ಯಾಹ್ನ 3 ಗಂಟೆಗೆ ಶಾಂತಿಧಾಮದ ಸಮಾಧಿ ಸ್ಥಳಕ್ಕೆ ಸಾವಿರಾರು ಜನರ ಮಧ್ಯೆ ‘ಭೀಮಣ್ಣ ಖಂಡ್ರೆ ಸಾಬ್ ಅಮರ್ ರಹೇ’ ಎಂಬ ಜಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಪಾರ್ಥೀವ ಶರೀರ ಕರೆದೊಯ್ಯಲಾಯಿತು. ಅಲ್ಲಿ ನೂರಾರು ಸಂಖ್ಯೆಯಲ್ಲಿ ಮಠಾಧೀಶರು, ಸಂತರು ರಾಜಕೀಯ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರು, ಮಾಜಿ ಸಚಿವರು, ಶಾಸಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಬಂಧು ಬಳಗದವರು ಆಗಮಿಸಿ ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು.

ಆ ಬಳಿಕ ಸಂಜೆ ಭಾಲ್ಕಿಯ ಚಿಕಲಚಂದಾ ಗ್ರಾಮದ ಖಂಡ್ರೆ ಪರಿವಾರದ ಹೊಲದ ಶಾಂತಿಧಾಮದಲ್ಲಿರುವ ಭೀಮಣ್ಣ ಖಂಡ್ರೆ ಅವರ ಧರ್ಮಪತ್ನಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದಕ್ಕೂ ಮೊದಲು ಪಾರ್ಥೀವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಸಿಎಂ ಸಿದ್ದರಾಮಯ್ಯ ಅವರು ಸಚಿವ ಈಶ್ವರ ಖಂಡ್ರೆ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಪೊಲೀಸ್‌ ಇಲಾಖೆಯಿಂದ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು.ವೀರಶೈವ ಲಿಂಗಾಯತ ಪದ್ಧತಿಯಂತೆ ಧಾರ್ಮಿಕ ವಿಧಿವಿಧಾನ ನೆರೆವೇರಿತು. ಭೀಮಣ್ಣ ಖಂಡ್ರೆ ಅವರ ಪುತ್ರರಾದ ಈಶ್ವರ ಖಂಡ್ರೆ, ಅಮರ ಖಂಡ್ರೆ, ಮೊಮ್ಮಕ್ಕಳಾದ ಸಂಸದ ಸಾಗರ ಖಂಡ್ರೆ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ನೇತೃತ್ವದಲ್ಲಿ ಯಾವುದೇ ಅವಘಡ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಬಾಕ್ಸ್)))ಅಂಗಡಿ ಮುಂಗಟ್ಟು ಬಂದ್

ಭೀಮಣ್ಣ ಖಂಡ್ರೆ ಅವರ ಅಗಲಿಕೆಯಿಂದ ಇಡೀ ಭಾಲ್ಕಿ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಗೌರವಪೂರ್ವಕವಾಗಿ ಪಟ್ಟಣದ ಎಲ್ಲ ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಲಾಗಿತ್ತು. ಪಕ್ಷಾತೀತವಾಗಿ ಎಲ್ಲರೂ ಖಂಡ್ರೆ ಅವರ ಮನೆಯತ್ತ ಹೆಜ್ಜೆ ಹಾಕುತ್ತಿದ್ದದ್ದು ಕಂಡು ಬಂತು. ಎಲ್ಲ ವರ್ಗಗಳಿಂದಲೂ ವ್ಯಕ್ತವಾದ ಶ್ರದ್ಧಾಂಜಲಿ ಭೀಮಣ್ಣ ಖಂಡ್ರೆ ಅವರ ಜನಪರ ಸೇವೆ ಮತ್ತು ಆದರ್ಶದ ಬದುಕಿಗೆ ಸಲ್ಲಿಸಿದ ಗೌರವದ ಪ್ರತಿಬಿಂಬವಾಗಿತ್ತು.

ಬಾಕ್ಸ್))))

ಸಚಿವರು, ಸಂಸದರು,

ಶಾಸಕರಿಂದ ಅಂತಿಮ ನಮನಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಜಯಮೃತ್ಯುಂಜಯ ಶ್ರೀಗಳು, ನಿಜಗುಣಾನಂದ ಶ್ರೀ, ಹುಲಸೂರು ಶಿವಾನಂದ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯರು, ಹುಡಗಿ, ಇಲಕಲ್ ಶ್ರೀಗಳು, ಪ್ರಣವಾನಂದ ಶ್ರೀ ಸೇರಿ ಹಲವು ಮಠಾಧೀಶರು ಆಗಮಿಸಿ ಅಗಲಿದ ನಾಯಕನಿಗೆ ಆಶೀರ್ವದಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಶರಣಬಸ್ಸಪ್ಪ ದರ್ಶನಾಪೂರ, ಎಚ್.ಕೆ ಪಾಟೀಲ್, ಕೆ.ಜೆ.ಜಾರ್ಜ್, ಶರಣಪ್ರಕಾಶ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳಕರ್, ರಹೀಮ್ ಖಾನ್, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ ಸಿಂಗ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಶ್ರೇಯಸ್ ಪಟೇಲ್, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ್, ರಾಜಶೇಖರ ಪಾಟೀಲ್ ಹುಮನಾಬಾದ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಡಾ.ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಶಶೀಲ್ ನಮೋಶಿ, ಅಲ್ಲಮಪ್ರಭು ಪಾಟೀಲ್, ಅವಿನಾಶ ಜಾಧವ್, ತಿಪ್ಪಣಪ್ಪ ಕಮಕನೂರ, ಶರತ್ ಬಚ್ಚೇಗೌಡ, ಬಸವನಗೌಡ ಬಾದರ್ಲಿ, ಅಪ್ಪಾಜಿಗೌಡ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ವೀರಣ್ಣ ಚರಂತಿಮಠ, ಸುಭಾಶ ಕಲ್ಲೂರ್, ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ತೆಲಂಗಾಣ ಸಂಸದ ಅಶೋಕ ಶೆಟಕಾರ್ ಸೇರಿದಂತೆ ಇತರರು ಅಂತಿಮ ನಮನ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭೆ ಹೊರಹೊಮ್ಮಲು ಕಲೋತ್ಸವ ಉತ್ತಮ ವೇದಿಕೆ: ಡಾ. ಎಂ.ಸಿ. ಸುಧಾಕರ್
ಜಿಲ್ಲಾಸ್ಪತ್ರೆ ರಸ್ತೆ ಗುಣಮಟ್ಟ ಪರಿಶೀಲಿಸಿದ ನಳಿನ್ ಅತುಲ್