ಬೇಡ್ತಿ-ವರದಾ ಯೋಜನೆ ಶೀಘ್ರ ಜಾರಿ ಸಂಕಲ್ಪ ಮಾಡೋಣ-ಶಾಸಕ ಮಾನೆ

KannadaprabhaNewsNetwork |  
Published : Jan 18, 2026, 02:30 AM IST
ಹಾನಗಲ್ಲಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರನ್ನು ಭೇಟಿ ಮಾಡಿ ರೈತ ಸಂಘಗಳ ಪ್ರಮುಖರು ಹಾವೇರಿಯಲ್ಲಿ ನಡೆಯುವ ರೈತ ಸಭೆಗೆ ಆಹ್ವಾನಿಸಿದರು. | Kannada Prabha

ಸಾರಾಂಶ

ವರದಾ- ಬೇಡ್ತಿ ನದಿ ಜೋಡಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಸಿದ್ಧವಿದೆಯಲ್ಲದೆ, ಕೇಂದ್ರ ಸರ್ಕಾರವೂ ಯೋಜನೆ ಸಾಕಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಗ ಎಲ್ಲರೂ ಸಹಕರಿಸಿ ರೈತರಿಗಾಗಿ ಯೋಜನೆಯನ್ನು ಶೀಘ್ರ ಜಾರಿ ಮಾಡುವ ಸಂಕಲ್ಪ ಮಾಡೋಣ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ವರದಾ- ಬೇಡ್ತಿ ನದಿ ಜೋಡಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಸಿದ್ಧವಿದೆಯಲ್ಲದೆ, ಕೇಂದ್ರ ಸರ್ಕಾರವೂ ಯೋಜನೆ ಸಾಕಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಗ ಎಲ್ಲರೂ ಸಹಕರಿಸಿ ರೈತರಿಗಾಗಿ ಯೋಜನೆಯನ್ನು ಶೀಘ್ರ ಜಾರಿ ಮಾಡುವ ಸಂಕಲ್ಪ ಮಾಡೋಣ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ ಸೇರಿದಂತೆ ವಿವಿಧ ರೈತ ಸಂಘಟನೆಗಳ ಪ್ರಮುಖರು ಹಾಗೂ ರೈತ ಸಮುದಾಯ ಹಾನಗಲ್ಲಿನ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಶೀಘ್ರ ಯೋಜನೆ ಜಾರಿಯಾಗುವಂತೆ ಒತ್ತಾಯಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ನೀರಾವರಿ ಸಚಿವರು ಸಂಪೂರ್ಣವಾಗಿ ಈ ಯೋಜನೆಗೆ ತಮ್ಮ ಬೆಂಬಲ ಸಹಕಾರ ಘೋಷಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಯೋಜನೆ ಜಾರಿಗೆ ಎಲ್ಲ ಸಿದ್ಧತೆಗಳು ನಡೆದಿವೆ. ಯೋಜನೆಯ ವಾಸ್ತವ ರೂಪ ಕೈ ಸೇರಬೇಕಾಗಿದೆ. ಬೇಡ್ತಿ ನೀರನ್ನು ಹಾವೇರಿ ಜಿಲ್ಲೆಯಲ್ಲಿನ ವರದಾ ನದಿ ಮೂಲಕ ಹೇಗೆ ಜಿಲ್ಲೆಯ ರೈತರಿಗೆ ಅನುಕೂಲ ಮಾಡಬೇಕು ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಜಾರಿಗೆ ಯೋಜಿಸೋಣ ಎಂದರು. ಯಾರು ಯಾವುದೇ ರೀತಿ ವಿರೋಧ ವ್ಯಕ್ತಪಡಿಸಿದರೂ ಅದರ ಬಗ್ಗೆ ನಾವು ಚಿಂತಿಸುವುದು ಬೇಡ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಯೋಜನೆ ಜಾರಿಗೆ ಒಪ್ಪಿಗೆ ಸೂಚಿಸಿ ಕಾರ್ಯಪ್ರವೃತ್ತರಾಗಿರುವುದರಿಂದ ಅದಕ್ಕೆ ಸಹಕರಿಸುವುದಷ್ಟೇ ನಮ್ಮ ಜವಾಬ್ದಾರಿ. ಜ.26ರಂದು ಹಾವೇರಿ ಹುಕ್ಕೇರಿ ಮಠದಲ್ಲಿ ಸದಾಶಿವ ಮಹಾಸ್ವಾಮಿಗಳು ಹಾಗೂ ಎಲ್ಲ ಮಠಾಧೀಶರು, ಪಕ್ಷಾತೀತವಾಗಿ ಎಲ್ಲ ನಾಯಕರು ಒಟ್ಟಾಗಿ ಸಭೆ ನಡೆಸಿ ಈ ಯೋಜನೆ ಕಾರ್ಯ ರೂಪದ ಬಗ್ಗೆ ಸಮಾಲೋಚಿಸಲು ರೈತ ಸಂಘ ಸಭೆ ಕರೆದಿರುವುದರಿಂದ ಎಲ್ಲರ ಒಟ್ಟಾಭಿಪ್ರಾಯದಂತೆ ನಡೆಯೋಣ. ಸರ್ಕಾರಗಳೇ ಇದಕ್ಕೆ ಒಪ್ಪಿ ಮುನ್ನಡೆದಾಗ ಹೋರಾಟಗಳ ಅಗತ್ಯವಿಲ್ಲ. ಅಗತ್ಯ ಬಿದ್ದರೆ ಎಲ್ಲರೂ ಸೇರಿ ಸರ್ಕಾರಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಡೋಣ ಎಂದರು.ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೋತಂಬರಿ, ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಯೋಜನೆ ಸಾಕಾರಕ್ಕೆ ನಾವು ಎಲ್ಲ ಹೋರಾಟಕ್ಕೂ ಸಿದ್ಧ. ಉತ್ತರ ಕನ್ನಡದವರು ದುರುದ್ದೇಶಪೂರಿತರಾಗಿ ಈ ಯೋಜನೆಗೆ ಅಡ್ಡಿ ಮಾಡುವ ಹೇಳಿಕೆ ಸಮಾವೇಶ ಮಾಡುವುದು ಸರಿಯಲ್ಲ. ನಮಗೂ ದೊಡ್ಡ ಸಮಾವೇಶ ಮಾಡಲು ಗೊತ್ತಿದೆ. ನಾವು ಉತ್ತರ ಕರ್ನಾಟಕದವರು ಹೋರಾಟದಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ರಾಜ್ಯ ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಯೋಜನೆಗೆ ಸಹಕರಿಸುತ್ತಿರುವುದು ಅಭಿನಂದನೀಯ. ಇದರಲ್ಲಿ ಯಾವುದೇ ರಾಜಿ ಇಲ್ಲದೆ ಸರ್ಕಾರಗಳು ಯೋಜನೆ ಸಾಕಾರ ಮಾಡಿ ರೈತರಿ ಭೂಮಿಗೆ ನೀರು ಕೊಡುವ ಯೋಜನೆ ರೂಪಿಸಲಿ ಎಂದರು.ವಿವಿಧ ರೈತ ಸಂಘಗಳ ಮುಖಂಡರಾದ ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಷಣ್ಮುಖಪ್ಪ ಅಂದಲಗಿ, ಅಬ್ದುಲ್‌ಖಾದರ ಮುಲ್ಲಾ, ಮಲ್ಲನಗೌಡ ಪಾಟೀಲ, ಮಾಲಿಂಗಪ್ಪ ಬಿದರಮಳಿ, ಮಹಾಲಿಂಗಪ್ಪ ಅಕ್ಕಿವಳ್ಳಿ, ನಾಗೇಂದ್ರ ತುಮರಿಕೊಪ್ಪ, ನಸೀಮಾ, ಖುರ್ಷಿದಾ, ಶೀಲಾ ಭದ್ರಾವತಿ, ಮಹಾರುದ್ರಪ್ಪ ಕೂಸನೂರ, ಯಕಬಾಲ ಉಪ್ಪಿನ, ರಾಜು ಕೊಪ್ಪದ, ನಾಗಪ್ಪ ಬಿದರಗಡ್ಡಿ ಈ ಸಂದರ್ಭದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಠದಲ್ಲಿ ಗುರುಶಾಂತವೀರ ಶ್ರೀಗಳ ಅಂತ್ಯಕ್ರಿಯೆ
ಸಿದ್ಧೇಶ್ವರ ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆ