ಕಲೆಯಿಂದ ಸಮಾನ ಪ್ರಜ್ಞೆ ಜಾಗೃತವಾಗುತ್ತದೆ

KannadaprabhaNewsNetwork | Published : Apr 3, 2025 2:48 AM

ಸಾರಾಂಶ

ಕಲೆಯಿಂದ ಮಾತ್ರ ಎಲ್ಲರನ್ನೂ ಗೌರವಿಸುವ ಸಮಾನ ಪ್ರಜ್ಞೆ ಜಾಗೃತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಕಲೆಯಿಂದ ಮಾತ್ರ ಎಲ್ಲರನ್ನೂ ಗೌರವಿಸುವ ಸಮಾನ ಪ್ರಜ್ಞೆ ಜಾಗೃತವಾಗುತ್ತಿದೆ ಎಂದು ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಪ್ರತಿಪಾದಿಸಿದರು.ನಗರದ ಶಾರದಾವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶಾರದೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಹಿಂದು-ಮುಸ್ಲಿಂ ಎಂದು ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಾರೆ. ಆದರೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರು ಮತ್ತೋರ್ವ ಗಾಯಕ ಮೊಹಮದ್ ರಫಿ ಅವರನ್ನು ದೇವರು ಎಂದು ಭಾವಿಸಿಕೊಂಡಿದ್ದರು. ಒಂದು ಧರ್ಮದ ಸಾಂಪ್ರದಾಯಸ್ತ ವ್ಯಕ್ತಿ, ಮತ್ತೊಂದು ಧರ್ಮದ ಸಾಂಪ್ರದಾಯಸ್ತ ವ್ಯಕ್ತಿಯನ್ನು ದೇವರು ಎಂದು ಕರೆಯುವುದು ನಿಜಕ್ಕೂ ಆಶ್ಚರ್ಯದ ಸಂಗತಿ ಎಂದರು.ಕಲೆಯಿಂದ ಮಾತ್ರ ಎಲ್ಲರನ್ನೂ ಗೌರವಿಸುವ ಸಮಾನ ಪ್ರಜ್ಞೆ ಜಾಗೃತವಾಗುತ್ತಿದೆ. ಏಕೆಂದರೆ ಕಲೆಯ ಕಣ್ಣಿಗೆ ಬೇಧಭಾವ ಇರುವುದಿಲ್ಲ. ಕಲೆ ನಮ್ಮಲ್ಲಿರುವ ಸಣ್ಣತನ, ಕೆಡುಕುಗಳನ್ನು ತೊಲಗಿಸುತ್ತದೆ. ಕಲಾವಿದರು ಆಧುನಿಕ ತಂತ್ರಜ್ಞಾನವನ್ನು ಕೂಡ ಕಲಾ ಮಾಧ್ಯಮವಾಗಿ ಉಪಯೋಗಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲವನ್ನೂ ಕಲೆಯ ವ್ಯಾಪ್ತಿಗೆ ತರುವುದು ಅತ್ಯಂತ ಅದ್ಭುತ ಮತ್ತು ಸೋಜಿಗದ ಸಂಗತಿ ಎಂದರು.ಸಾಹಿತ್ಯದ ವಿದ್ಯಾರ್ಥಿಗಳಿಗೆ ಸಣ್ಣ ಸಂಗತಿಗಳೂ ಆಶ್ಚರ್ಯವನ್ನುಂಟು ಮಾಡುತ್ತವೆ. ಕುತೂಹಲಕಾರಿಯಾದ ವ್ಯಕ್ತಿತ್ವದೊಳಗೆ ಯಾವುದಾದರೊಂದು ಕಲೆ ಒಡಮೂಡುತ್ತದೆ. ಕಲೆಯಿಂದ ಎಲ್ಲವೂ ಸಾಧ್ಯವಿದೆ. ಪ್ರತಿಯೊಬ್ಬರು ತಮ್ಮ ಕಲೆಯನ್ನು ಪ್ರದರ್ಶಿಸುವುದು ಎಷ್ಟು ಮುಖ್ಯವೋ, ಇತರರ ಕಲೆಯನ್ನು ಗೌರವಿಸುವುದು ಮತ್ತು ಆಸವ್ವಾದಿಸುವುದು ಅಷ್ಟೇ ಮುಖ್ಯ ಎಂದು ಅವರು ಹೇಳಿದರು. ಭಾಷೆ ಒಂದು ಬಡ ಮಾಧ್ಯಮ. ಭಾಷೆಯಿಂದ ಎಲ್ಲವನ್ನೂ ಅಭಿವ್ಯಕ್ತಿಸಲು ಸಾಧ್ಯವಿಲ್ಲ. ವಾತಿನ ಮೂಲಕ ಎಲ್ಲದಕ್ಕೂ ಅರ್ಥವನ್ನು ಕಟ್ಟಿಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೇಹದ ಮೂಲ ಅರ್ಥೈಸುವುದನ್ನು ಮನುಷ್ಯರು ರೂಢಿಸಿಕೊಂಡರು ಎಂದರು.ಪ್ರಸ್ತುತ ಕಾಲಘಟ್ಟ ಅವಕಾಶಗಳ ಸ್ವರ್ಗವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು, ಯುವಜನರು ಅವಕಾಶ ಪಡೆದುಕೊಳ್ಳುವ ನಿಟ್ಟಿನಲ್ಲಿ ಪರಿಪೂರ್ಣತೆ ಕಡೆಗೆ ಸಾಗಬೇಕು. ಬದುಕು ಮತ್ತು ಕಲಾ ಪ್ರಕಾರಗಳಲ್ಲಿ ಬೇರೆಯವರನ್ನು ಅನುಸರಿಸುವುದು ಆರಂಭದಲ್ಲಿ ಗೌರವದ ಸಂಗತಿ. ಆದರೆ ಅನುಕರಣೆ ಮುಂದುವರೆದರೆ ಸಮಾಜದಿಂದ ನಿರ್ಲಕ್ಷಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜ್ಞಾನ ಮತ್ತು ಸೃಜನಶೀಲತೆಯಲ್ಲಿ ವಿಭಿನ್ನತೆ ಕಂಡುಕೊಳ್ಳಬೇಕು ಎಂದು ಹೇಳಿದರು.ಯಾವುದೇ ಭಾಷೆಯಲ್ಲಿನ ಬಹುಪಾಲು ಅರ್ಥಗಳು ಆರೋಪಿತ ಅರ್ಥಗಳಾಗಿವೆ. ಹಕ್ಕಿ ಹಾಡುವುದಿಲ್ಲ, ಹೂ ತೂಗುವುದಿಲ್ಲ. ಕೋಗಿಲೆಯ ಕೂಗಿಗೆ ಕವಿಗಳು ಹಾಡು ಎಂದು ಹೆಸರಿಟ್ಟರು. ಹೀಗೆ ಕವಿಗಳು ಪ್ರತಿ ಅರ್ಥವನ್ನು ಆರೋಪಿಸಿದಾಗ ಕಲೆ ಮತ್ತು ಬದುಕು ಚಂದ ಎನಿಸುತ್ತದೆ ಎಂದು ಅವರು ತಿಳಿಸಿದರು.ಹೊಸ ತಲೆವಾರಿನ ಜನರು ಓದುವುದರಿಂದ ಏನು ಸಿಗುತ್ತದೆ ಎಂದು ಪ್ರಶ್ನಿಸುತ್ತಾರೆ. ಕಲಿಕೆಯನ್ನು, ಜ್ಞಾನವನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲವನ್ನೂ ಹಣದ ಆಧಾರದಲ್ಲಿಯೇ ಅಳೆಯುತ್ತಾರೆ. ಹಣ ಯಾವಾಗಲೂ ನಮ್ಮೊಡನೆ ಸ್ಥಿರವಾಗಿ ಉಳಿಯುವುದಿಲ್ಲ. ಆದರೆ ಶಿಕ್ಷಣ ಯಾವತ್ತಿಗೂ ಶಾಶ್ವತ ನಮ್ಮೊಂದಿಗಿರುತ್ತದೆ ಎಂದು ಅವರು ಕಿವಿಮಾತು ಹೇಳಿದರು. ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಆರ್. ದಿನೇಶ, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ದೇವಿಕಾ ಮೊದಲಾದವರು ಇದ್ದರು.

Share this article