ಕನ್ನಡಪ್ರಭ ವಾರ್ತೆ ಬಳ್ಳಾರಿ
ಕರ್ನಾಟಕ ರೆಡ್ಡಿ ಜನಸಂಘದ ಶತಮಾನೋತ್ಸವ ಸಮಾರಂಭ ಸೆ. 24ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ನ 4ನೇ ಗೇಟ್‌ನ ಗಾಯತ್ರಿ ವಿಹಾರ್‌ನಲ್ಲಿ ಜರುಗಲಿದೆ ಎಂದು ರೆಡ್ಡಿ ಗುರುಪೀಠದ ಶ್ರೀ ವೇಮನಾನಂದ ಸ್ವಾಮಿ ಹಾಗೂ ರೆಡ್ಡಿ ಜನಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ನಾರಾ ಪ್ರತಾಪ ರೆಡ್ಡಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1925ರಲ್ಲಿ ಬೆಂಗಳೂರಿನಲ್ಲಿ ರೆಡ್ಡಿ ಜನಸಂಘ ಸ್ಥಾಪನೆಗೊಂಡಿತು. ಕಳೆದ ನೂರು ವರ್ಷಗಳಲ್ಲಿ ಸಂಘದಿಂದ ಅನೇಕ ಸಮಾಜಮುಖಿ ಕಾರ್ಯ ಸಂಘಟಿಸುತ್ತಾ ಬರಲಾಗಿದೆ. ಪ್ರಮುಖವಾಗಿ ಸಮಾಜದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ರೆಡ್ಡಿ ಜನಸಂಘ ಮಹತ್ವದ ಕೊಡುಗೆ ನೀಡಿದೆ. ಸಂಘದ ಶಾಲಾ, ಕಾಲೇಜುಗಳು, ತಾಂತ್ರಿ ವಿದ್ಯಾಲಯಗಳು ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ಸಮಾಜಕ್ಕೆ ಮತ್ತಷ್ಟೂ ಕೊಡುಗೆ ನೀಡಬೇಕು ಎಂಬ ಆಶಯದಲ್ಲಿ ಆಸ್ಪತ್ರೆಗೆ ಸೇವೆಗೂ ಸಿದ್ಧವಾಗುತ್ತಿದ್ದು ಕಸವನಹಳ್ಳಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ರೆಡ್ಡಿಜನ ಸಂಘ ಆಶ್ರಯದಲ್ಲಿ ಸುಮಾರು 12 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಎಲ್‌ಕೆಜಿಯಿಂದ ಎಂಜಿನಿಯರ್ ಶಿಕ್ಷಣ ದೊರೆಯುತ್ತಿದೆ.
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಉದ್ಯೋಗ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಈ ಹಿಂದೆ ಸಮುದಾಯದ ಹಿರಿಯರು ರೆಡ್ಡಿ ಜನಸಂಘ ಬೆಳೆಸಲು ಸಾಕಷ್ಟು ಶ್ರಮಿಸಿದ್ದಾರೆ. ಮದುವೆ ಸಮಾರಂಭಗಳಲ್ಲಿ ಹುಂಡಿ ಹಿಡಿದುಕೊಂಡು ಜನರಿಂದ ದೇಣಿಗೆ ಸಂಗ್ರಹಿಸಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಜೀರೋದಿಂದ ಶುರುಗೊಂಡ ರೆಡ್ಡಿ ಜನಸಂಘ ಇಂದು ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದು ಇದರ ಶತಮಾನೋತ್ಸವ ಸಂಭ್ರಮಕ್ಕೆ ನಾಡಿನ ಜನರು ಸಾಕ್ಷಿಯಾಗುತ್ತಿದ್ದಾರೆ ಎಂದರು.ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಶತಮಾನೋತ್ಸವದಲ್ಲಿ ಶತ ವರ್ಷಗಳ ಸಾಧನೆಯನ್ನು ಮೆಲುಕು ಹಾಕುವುದರ ಜತೆಗೆ ಸಮಾಜಮುಖಿಯಾಗಿ ಸೇವೆ ಸಲ್ಲಿಸಿರುವ ಸಮುದಾಯದ ಅನೇಕರನ್ನು ಗುರುತಿಸಿ ಗೌರವಿಸುವುದು ಸೇರಿದಂತೆ ಹತ್ತಾರು ಕಾರ್ಯಕ್ರಮ ಆಯೋಜಿಸಲಾಗಿದೆ. ರೆಡ್ಡಿ ಜನಸಂಘದಿಂದ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಮಾಜಮುಖಿ ಸೇವಾ ಕಾರ್ಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಿ, ಪೂರಕ ನಿರ್ಣಯ ಕೈಗೊಳ್ಳಲಾಗುವುದು. ಬೆಳಗ್ಗೆ 10ರಿಂದ ಸಂಜೆ 6ಗಂಟೆವರೆಗೆ ನಿರಂತರವಾಗಿ ಶತಮಾನೋತ್ಸವ ಸಂಭ್ರಮ ಮುಂದುವರಿಯಲಿದೆ. ಬೆಳಗ್ಗೆ ಮತ್ತು ಮಧ್ಯಾಹ್ನದ ಗೋಷ್ಠಿ ನಡೆಯಲಿದ್ದು, ಸಮುದಾಯ ಪ್ರಗತಿ ನೆಲೆಯಲ್ಲಿ ಆಗಬೇಕಾದ ಕಾರ್ಯಗಳ ಕುರಿತು ಸಮುದಾಯದ ಹಿರಿಯ ನಾಯಕರು ಮಾತನಾಡಲಿದ್ದಾರೆ. ಶತಮಾನೋತ್ಸವ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನೆರೆಯ ತೆಲಂಗಾಣ ಸಿಎಂ ರೇವಂತ ರೆಡ್ಡಿ ಸೇರಿದಂತೆ ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಹಾಗೂ ನಾಡಿನ ವಿವಿಧ ಜಿಲ್ಲೆಗಳ ರೆಡ್ಡಿಜನ ಸಮುದಾಯದ ಮುಖಂಡರು ಹಾಗೂ ಸಂಘದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರೆಡ್ಡಿ ಜನಸಂಘದ ರಾಜ್ಯ ಪ್ರಮುಖ ಮುಖಂಡರಾದ ಲಕ್ಷ್ಮಣರೆಡ್ಡಿ, ಕೃಷ್ಣಾರೆಡ್ಡಿ, ಬಾಬುರೆಡ್ಡಿ ಭೈರತಿ, ರಾಜಾರೆಡ್ಡಿ, ಗಣಪಾಲ ಐನಾಥರೆಡ್ಡಿ, ಪ್ರಭಾಕರರೆಡ್ಡಿ, ಶಾಂತರಾಜ, ಹೇಮಚಂದ್ರ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು. ಜನಗಣತಿಯಲ್ಲಿ ಹಿಂದೂ ರೆಡ್ಡಿ ಎಂದು ಬರೆಸಿ
ಜಾತಿ ಜನಗಣತಿ ವೇಳೆ ಹಿಂದೂ ರೆಡ್ಡಿ ಎಂದು ಬರೆಯಿಸಬೇಕು ಎಂದು ರೆಡ್ಡಿಗುರುಪೀಠದ ಶ್ರೀ ವೇಮನಾನಂದ ಸ್ವಾಮಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇರೆ ಸಮುದಾಯಗಳಲ್ಲಿ ಇರುವಂತೆ ನಮ್ಮಲ್ಲಿ ಸಹ ಹಲವು ಪಂಗಡಗಳು ಇವೆ. ಭಿನ್ನ ಸಂಸ್ಕೃತಿಯ, ಭಿನ್ನ ಸಂಪ್ರದಾಯದ ಜನರು ಸಮುದಾಯದಲ್ಲಿದ್ದಾರೆ. ಸಂಸ್ಕೃತಿ, ಸಂಪ್ರದಾಯ ಏನೇ ಇರಲಿ; ಹಾಗೆಯೇ ಇಟ್ಟುಕೊಂಡು ಜಾತಿ ಕಾಲಂನಲ್ಲಿ ಹಿಂದೂ ರೆಡ್ಡಿ ಎಂದೇ ಬರೆಸಬೇಕು. ಹಿಂದುಳಿದ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 1105 ಸಂಖ್ಯೆಯಡಿ ಹಿಂದೂ ರೆಡ್ಡಿ ನಮೂದಿಸಬೇಕು. ರೆಡ್ಡಿಗಳು ಒಗ್ಗಟ್ಟಾಗಿರಬೇಕು. ನಮ್ಮ ಸಮುದಾಯದ ಸಂಖ್ಯೆಯನ್ನು ಸರ್ಕಾರಕ್ಕೆ ತಿಳಿಸಬೇಕು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜಾತಿ ಕಾಲಂನಲ್ಲಿ ಹಿಂದೂ ರೆಡ್ಡಿ ಎಂದು ಬರೆಸುವುದನ್ನು ಮರೆಯಬಾರದು ಎಂದು ಶ್ರೀಗಳು ಮನವಿ ಮಾಡಿದರು.