ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಎದುರು ನಿರ್ಮಿಸಲಾಗಿರುವ ಸಂಗೊಳ್ಳಿ ರಾಯಣ್ಣನ ಫೈಬರ್ ಪುತ್ಥಳಿಯನ್ನು ಬದಲಾಯಿಸಿ ನೂತನವಾಗಿ ಕಂಚಿನ ಪುತ್ಥಳಿ ನಿರ್ಮಿಸಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಕುರುಬ ಸಮುದಾಯದ ಮುಖಂಡರು ಹಾಗೂ ವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಹೋರಾಟ ಸಮಿತಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಈ ಹಿಂದೆ ರಾಯಣ್ಣನ ಪ್ರತಿಮೆ ಸ್ಥಾಪನೆ ವೇಳೆ ಸರ್ಕಾರ ಹಾಗೂ ಕಾನೂನಾತ್ಮಕ ಅನುಮತಿ ಪಡೆಯಲಾಗಿರಲಿಲ್ಲ, ಹೀಗಾಗಿ ಪುತ್ಥಳಿಯ ಅನಾವರಣ ಕಾರ್ಯ ನನೆಗುದಿಗೆ ಬಿದ್ದಿತ್ತು, ಸಮುದಾಯದ ಮುಖಂಡರ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ತಂದು, ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮತಿ ದೊರಕಿಸಿ ಕೊಟ್ಟಿದ್ದೇವೆ.
ಪುತ್ಥಳಿಯ ಸ್ಥಾಪನೆ ವಿಚಾರದಲ್ಲಿ ನನ್ನೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಬಿ.ನಾಗೇಂದ್ರ ಅವರು ಕೂಡ ಸರ್ಕಾರದ ಮೇಲೆ ಒತ್ತಡ ತಂದು ಈ ಕಾರ್ಯ ಸಾಧ್ಯವಾಗಿಸಿದ್ದಾರೆ. ಸಮುದಾಯದ ಪರ ಅವರಿಗೂ ಧನ್ಯವಾದ ಸಲ್ಲಿಸುವೆ ಎಂದರು.ಈಗಿರುವ ಪುತ್ಥಳಿಯು ಫೈಬರ್‌ನಿಂದ ತಯಾರಿಸಲಾಗಿದ್ದು, ಸದರಿ ಪುತ್ಥಳಿಯನ್ನು ತೆರವುಗೊಳಿಸಲಾಗುವುದು. ರಾಯಣ್ಣನ ನೂತನ ಕಂಚಿನ ಪ್ರತಿಮೆ ನಿರ್ಮಿಸಿ, ಇದೇ ಜಾಗದಲ್ಲಿ ಸ್ಥಾಪಿಸಿ, ಅನಾವರಣಗೊಳಿಸಲಾಗುವುದು ಎಂದು ಶಾಸಕ ಭರತ್ ರೆಡ್ಡಿ ಭರವಸೆ ನೀಡಿದರು.
ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾ. ಗಾದಿಲಿಂಗನಗೌಡ, ಮಾಜಿ ಮೇಯರ್ ಎಂ.ರಾಜೇಶ್ವರಿ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ, ಹೋರಾಟ ಸಮಿತಿಯ ಇಟ್ಟಂಗಿಭಟ್ಟಿ ಯರಿಸ್ವಾಮಿ, ಕೆ.ಮೋಹನ್, ಸುಬ್ಬರಾಯುಡು, ಬೆಣಕಲ್ ಮಂಜುನಾಥ, ಕೆ.ಯಶೋಧಾ, ಕೊಳಗಲ್ ಅಂಜಿನಿ, ಸುರೇಂದ್ರಗೌಡ, ಕವಿತಾ ಸೇರಿದಂತೆ ಕುರುಬ ಸಮುದಾಯದ ಅನೇಕ ಮುಖಂಡರಿದ್ದರು.