ಶಿರಸಿ: ರಾಜ್ಯದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಸೆ.22ರಿಂದ ಅ.2ರವರೆಗೆ ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಶನಿವಾರ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ ಮಾಹಿತಿ ನೀಡಿ, ಪ್ರತಿ ವರ್ಷದಂತೆ ಈ ವರ್ಷವೂ ವೈಭವದಿಂದ ನವರಾತ್ರಿ ಉತ್ಸವ ಆಚರಿಸಲಾಗುತ್ತದೆ. ಸೆ.20 ಹಾಗೂ 21 ರಂದು ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಖೋ ಖೋ, ಕಬ್ಬಡಿ, ವಾಲಿಬಾಲ್, ರನ್ನಿಂಗ್, ಗುಂಡು ಎಸೆತ, ನಡಿಗೆ , ಬಾಲ್ ಎಸೆತ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.ಸೆ.22ರಿಂದ ಅ.2ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಮಾರಿಕಾಂಬಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವರಾತ್ರಿ ಉತ್ಸವದ ಪ್ರತಿದಿನ ಸಪ್ತಶತಿ ಪಾರಾಯಣ ಹಾಗೂ ಪಲ್ಲವ ಪಾರಾಯಣ ನಡೆಯಲಿದೆ. ಪ್ರತಿದಿನ ಸಂಜೆ 7 ರಿಂದ 9 ಗಂಟೆವರೆಗೆ ನಾಡಿನ ಹೆಸರಾಂತ ಕಲಾವಿದರಿಂದ ಕೀರ್ತನೆಗಳು ನಡೆಯಲಿದೆ. ಅ.2 ವಿಜಯ ದಶಮಿ ದಿನದಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ರಾತ್ರಿ 10 ಗಂಟೆ ನಂತರ ಕೋಟೆಕೆರೆ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ, ಪಡಿಯಾಟ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.
ನವರಾತ್ರಿ ಉತ್ಸವದ ನಿಮಿತ್ತ ಸ್ಪರ್ಧೆಗಳು: ನವರಾತ್ರಿ ಉತ್ಸವದ ಪ್ರಯುಕ್ತ ಸೆ.22 ರಂದು ಬೆಳಿಗ್ಗೆ 9 ರಿಂದ 12 ರ ವರೆಗೆ ರಂಗವಲ್ಲಿ ಸ್ಪರ್ಧೆ, ಸಂಜೆ 3 ರಿಂದ 6 ರವರೆಗೆ ಭಕ್ತಿ ಗೀತೆಗಳ ಸ್ಪರ್ಧೆ, ಸೆ.23 ರಂದು ಬೆಳಿಗ್ಗೆ 9 ರಿಂದ 12 ರ ವರೆಗೆ ಸಮೂಹ ದೇಶಭಕ್ತಿಗೀತೆಗಳ ಸ್ಪರ್ಧೆ, ಸಂಜೆ 3 ರಿಂದ 6 ಗಂಟೆಯ ವರೆಗೆ ಶಾಸ್ತ್ರೀಯ ನೃತ್ಯ (ಭರತನಾಟ್ಯ) ಸ್ಪರ್ಧೆ, ಸೆ.24ರ ಬೆಳಿಗ್ಗೆ 9 ರಿಂದ 12 ರವರೆಗೆ ಹಳ್ಳಿಯ ಹಾಡುಗಳ ಸ್ಪರ್ಧೆ, ಸಂಜೆ 3 ರಿಂದ 6 ರ ವರೆಗೆ ಭರತನಾಟ್ಯ ಸ್ಪರ್ಧೆ, ಸೆ.25 ರಂದು ಬೆಳಿಗ್ಗೆ 9 ರಿಂದ 12 ರ ವರೆಗೆ ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆ, ಸಂಜೆ ಜಾನಪದ ಗುಂಪು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಧರ್ಮದರ್ಶಿ ಮಂಡಳಿ ಸದಸ್ಯರಾದ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ, ಬಸವರಾಜ ಚಕ್ರಸಾಲಿ, ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಉಪಸ್ಥಿತರಿದ್ದರು.