ಮುಖ್ಯಶಿಕ್ಷಕರು, ಸಹ ಶಿಕ್ಷಕರ ಕ್ರಿಯಾಶೀಲತೆ ಪರಿಣಾಮ ಕ್ಲಸ್ಟರ್ನ ಉತ್ಸಾಹಿ ಶಿಕ್ಷಕರ ಸಹಕಾರದಲ್ಲಿ ಶತಮಾನದ ಸರ್ಕಾರಿ ಬಾಲಕರ ಶಾಲೆಯಲ್ಲಿ ಇಲಾಖೆ ಶೈಕ್ಷಣಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಾ ಬಂದಿರುವುದು ಮಾದರಿಯಾಗಿದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
150 ವರ್ಷ ಪೂರೈಸಿದ ಜಿಲ್ಲೆಯ ಪ್ರಪ್ರಥಮ ಶತಮಾನದ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣವಾಗಲಿರುವುದು ಸಂತಸ ತಂದಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯಶಿಕ್ಷಕ ವಿ.ವೆಂಕಟರಾಮೇಗೌಡ ಆಶಯ ವ್ಯಕ್ತಪಡಿಸಿದರು.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಈ ಶಾಲೆಯನ್ನು ಶಿಕ್ಷಣ ಇಲಾಖೆ ಸರ್ಕಾರಿ ಪ್ರೌಢೆಶಾಲೆ ಆರಂಭಿಸಿ ಕೊಡುಗೆ ನೀಡಿದೆ. ಇದೀಗ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಅನುಮೂದನೆ ದೊರೆತಿರುವುದು ಸಂತಸ ತರಿಸಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಬಡಮಕ್ಕಳ ಶಿಕ್ಷಣಕ್ಕೆ ಚೈತನ್ಯ ತುಂಬಲಿದೆ ಎಂದರು.
ಮುಖ್ಯಶಿಕ್ಷಕರು, ಸಹ ಶಿಕ್ಷಕರ ಕ್ರಿಯಾಶೀಲತೆ ಪರಿಣಾಮ ಕ್ಲಸ್ಟರ್ನ ಉತ್ಸಾಹಿ ಶಿಕ್ಷಕರ ಸಹಕಾರದಲ್ಲಿ ಶತಮಾನದ ಸರ್ಕಾರಿ ಬಾಲಕರ ಶಾಲೆಯಲ್ಲಿ ಇಲಾಖೆ ಶೈಕ್ಷಣಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಾ ಬಂದಿರುವುದು ಮಾದರಿಯಾಗಿದೆ ಎಂದರು.
ಮೇಲುಕೋಟೆ ಶೈಕ್ಷಣಿಕ ವೃತ್ತದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಇಲಾಖೆ ನೀಡಿದ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳ ಪ್ರತಿಭೆಯನ್ನು ಕಾರಂಜಿಯಂತೆ ಪುಟಿದೇಳುವಂತೆ ಮಾಡಲಾಗುತ್ತಿದೆ ಎಂದರು.
ಪದವೀಧರ ಶಿಕ್ಷಕರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಮೇಲುಕೋಟೆಯ ಪ್ರಮುಖ ಸ್ಥಳದಲ್ಲಿ 10 ಕಿಮೀ ವ್ಯಾಪ್ತಿಯಲ್ಲಿ ಪ್ರೌಢಶಾಲೆ ಇಲ್ಲದೆ ಮಕ್ಕಳು ಶೈಕ್ಷಣಿಕವಾಗಿ ತೊಂದರೆ ಅನುಭವಿಸುತ್ತಿದ್ದರು. ಕಳೆದ ಬಾರಿ ಪ್ರತಿಭಾ ಕಾರಂಜಿಯ ವೇದಿಕೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಲು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಸಂತಾನರಾಮನ್ಗೆ ಸಲಹೆ ನೀಡಲಾಗಿತ್ತು. ಮುಖ್ಯಶಿಕ್ಷಕರು ಶಾಸಕರು ಮತ್ತು ಅಧಿಕಾರಿಗಳ ಸಹಕಾರದಲ್ಲಿ ಮೇಲುಕೋಟೆಗೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಿ ಪ್ರಸಕ್ತ ಸಾಲಿನಲ್ಲೇ ಆರಂಭಿಸಿರುವುದು ಶ್ಲಾಘನೀಯ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್.ಕೆ.ಜಿಯಿಂದ ಪ್ರೌಢಶಾಲೆಯವರೆಗೆ ತರಗತಿ ಹೊಂದಿರುವ ಶಾಲೆಯನ್ನು ಇದೀಗ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಿಸಲು ಶ್ರಮಿಸುತ್ತಿರುವುದು ಮಕ್ಕಳಿಗೆ ವರದಾನವಾಗಲಿದೆ. ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸಿಆರ್.ಪಿ ಬೆಟ್ಟಸ್ವಾಮಿಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರ್, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಜಕ್ಕನಹಳ್ಳಿ ಶಾಲೆ ಮುಖ್ಯಶಿಕ್ಷಕ ಬಸವರಾಜು, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಮಹಾಲಕ್ಷ್ಮಿ, ನಿತ್ಯಾ, ಶ್ವೇತ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದೇ ವೇಳೆ ಚಿತ್ರಕಲೆ, ವಿವಿಧ ವೇಷ, ಕ್ಲೇಮಾಡಲಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ನೂರಾರು ಮಕ್ಕಳು ಭಾಗವಹಿಸಿ ಪ್ರತಿಭೆ ಅನಾವರಣ ಮಾಡಿ ಬಹುಮಾನ ಗಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.