ಭದ್ರಾ ಮೇಲ್ದಂಡೆಗೆ ₹5300 ಕೋಟಿ ನೀಡಲು ಕೇಂದ್ರ ಬದ್ಧ: ಸಂಸದ ಗೋವಿಂದ ಕಾರಜೋಳ

KannadaprabhaNewsNetwork |  
Published : Jun 30, 2024, 12:49 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್  | Kannada Prabha

ಸಾರಾಂಶ

ಕೇಂದ್ರ ಜಲಶಕ್ತಿ ಇಲಾಖೆ ನಿರೀಕ್ಷಿಸುವ ಕೆಲ ದಾಖಲಾತಿಗಳ ರಾಜ್ಯ ಸರ್ಕಾರ ಪೂರೈಕೆ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5300 ಕೋಟಿ ನೀಡಲು ಬದ್ಧವಿದೆ. ಈ ಸಂಬಂಧ ರಾಜ್ಯ ಸರ್ಕಾರ ಕೆಲ ತಾಂತ್ರಿಕ ಮಾಹಿತಿ ಪೂರೈಕೆ ಮಾಡುವುದು ಬಾಕಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿನ ಪತಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ದಿನಗಳ ಹಿಂದೆ ದೆಹಲಿಯಲ್ಲಿ ರಾಜ್ಯ ಸಂಸದರುಗಳ ಸಭೆ ಕರೆದಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್, ಸಚಿವರುಗಳಾದ ವಿ.ಸೋಮಣ್ಣ, ಜೋಶಿ, ಶೋಭಾ ಕರಂದ್ಲಾಜೆ ಸೇರಿ ಎಲ್ಲರೂ ಪಾಲ್ಗೊಂಡಿದ್ದರು. ಅಂದಿನ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪ್ರಧಾನವಾಗಿ ಪ್ರಸ್ತಾಪಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ನಿರ್ಮಲ ಸೀತರಾಮನ್, ಬಜೆಟ್ ಘೋಷಣೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರ ಜಲಶಕ್ತಿ ಇಲಾಖೆ ನಿರೀಕ್ಷಿಸುವ ಕೆಲ ದಾಖಲಾತಿಗಳ ರಾಜ್ಯ ಸರ್ಕಾರ ಪೂರೈಕೆ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲಾತಿ ಒದಗಿಸುವ ಭರವಸೆ ನೀಡಿದ್ದು ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿ ಪೂರ್ಣಗೊಳಿಸಿದರೆ ನಂತರ ಕೇಂದ್ರದಿಂದ ತಾವು ಅನುದಾನ ಬಿಡುಗಡೆ ಮಾಡಿಸುವುದಾಗಿ ಗೋವಿಂದ ಕಾರಜೋಳ ಹೇಳಿದರು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಿಕೊಳ್ಳಬೇಕೆಂಬ ಒತ್ತಡಗಳು ಇವೆ. ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿಸುವಂತೆ ತಾವೇ ಕೇಂದ್ರದ ಮುಂದೆ ಕಡತಗಳ ಒಯ್ದು ಪ್ರಸ್ತಾಪ ಮಂಡಿಸಿದ್ದೆ. ಹಾಗಾಗಿ ಅನುದಾನ ತರಲು ತಾವೇ ಓಡಾಡುವುದಾಗಿ ಹೇಳಿದರು.

21 ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆಗೆ 2007ರಲ್ಲಿ ಕೇವಲ 50 ಕೋಟಿ ರುಪಾಯಿ ಟೋಕನ್ ಗ್ರಾಂಟ್ ಇಟ್ಟು ಕೆಲಸ ಆರಂಭಿಸಲಾಯಿತು. ಇದುವರೆಗೂ ಕೇವಲ 9 ಸಾವಿರ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಒಮ್ಮೆ ₹2500 ಕೋಟಿ ಮತ್ತೊಮ್ಮೆ ₹3 ಸಾವಿರ ಕೋಟಿ ಬಿಡುಗಡೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರ ಸರ್ಕಾರ ₹800 ಕೋಟಿ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದಲ್ಲಿ ಮಾತ್ರ ಭದ್ರಾ ಮೇಲ್ದಂಡೆ ಶೀಘ್ರ ಮುಗಿಯುತ್ತದೆ ಎಂದರು.

ರಾಜ್ಯದ ಹಲವೆಡೆಗಳಲ್ಲಿ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗಿದ್ದು, ಚಿತ್ರದುರ್ಗದಲ್ಲಿ ಮಾತ್ರ ಅದು ಸಾಧ್ಯವಾಗಿಲ್ಲ. ಕೇಂದ್ರೀಯ ವಿದ್ಯಾಲಯ ಆರಂಭವಾದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ. ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವಂತೆ ಕೇಂದ್ರ ಸಚಿವ ಧರ್ಮೇಂದ್ರ ಕುಮಾರ್‌ಗೆ ಮನವಿ ಮಾಡಲಾಗಿದೆ. ವಿದ್ಯಾಲಯ ಸ್ಥಾಪನೆ ಬಗ್ಗೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.

ಹೊಸದುರ್ಗ ರೈಲು ನಿಲ್ದಾಣದಲ್ಲಿ ಕೆಲ ರೈಲುಗಳ ನಿಲುಗಡೆಯಾಗಬೇಕೆಂದು ಅಲ್ಲಿನ ಜನರು ವಿನಂತಿ ಮಾಡಿಕೊಂಡಿದ್ದರು. ಪ್ರಯಾಣಿಕರು ಬಯಸಿದ ಹಿನ್ನೆಲೆಯಲ್ಲಿ, ವಾಸ್ಕೋಡಿಗಾಮ- ಯಶವಂತ ಪುರ, ವಿಶ್ವಮಾನವ, ಚಾಲುಕ್ಯ, ಗೋಳಗುಮ್ಮಟ, ಸೇರಿದಂತೆ ಇತರೆ ರೈಲುಗಳ ನಿಲುಗಡೆಗೆ ರೇಲ್ವೆ ಸಚಿವ ಅಶ್ವಿನ್ ಹಾಗೂ ಸೋಮಣ್ಣ ಅವರಲ್ಲಿ ಮನವಿ ಮಾಡಲಾಗಿದೆ.

ದಾವಣಗೆರೆ ಮತ್ತು ತುಮಕೂರು ರೈಲ್ವೇ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು, ಯೋಜನೆ ಯಾವ ಸ್ಥಿತಿಯಲ್ಲಿದೆ ಎಂದು ಮಾಹಿತಿ ಪಡೆದು, ಖುದ್ದು ಸ್ಥಳ ಪರಿಶೀಲನೆ ಮಾಡಲಾಗುವುದು ಎಂದರು.

ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎ. ಮುರುಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಧುರಿ ಗಿರೀಶ್, ಸುರೇಶ್ ಸಿದ್ದಾಪುರ, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೆ,, ದಗ್ಗೆ ಶಿವಪ್ರಕಾಶ್, ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ವೀಕ್ಷಿಸಿದ ಸಂಸದ ಡಾ.ಕೆ.ಸುಧಾಕರ್
ಅರಣ್ಯ ಭೂಮಿ ಕಬಳಿಸುವವರ ವಿರುದ್ಧ ಕ್ರಮಕ್ಕೆ ಸಚಿವರ ಸೂಚನೆ