ಲಿಂಗಾನುಪಾತ ಸುಧಾರಣೆಗೆ ಕೇಂದ್ರದ ಮಹತ್ವದ ಯೋಜನೆ-ಗುಡ್ಡದಾನವೇರಿ

KannadaprabhaNewsNetwork | Published : Jan 20, 2024 2:04 AM

ಸಾರಾಂಶ

ದೇಶದಲ್ಲಿ ಲಿಂಗ ತಾರತಮ್ಯ ನಿವಾರಣೆ ಮತ್ತು ಮಹಿಳಾ ಸಬಲೀಕರಣ ಉದ್ದೇಶದಿಂದ ೨೦೧೫ರಲ್ಲಿ ಭಾರತ ಸರ್ಕಾರ ಬೇಟಿ ಬಚಾವೋ, ಬೇಡಿ ಪಢಾವೋ ಯೋಜನೆ ಪರಿಚಯಿಸಿತು. ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಎಂಬುದು ಇದರ ಅರ್ಥ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮೃತ್ಯುಂಜಯ ಗುಡ್ಡದಾನವೇರಿ ಹೇಳಿದರು.

ಶಿರಹಟ್ಟಿ: ದೇಶದಲ್ಲಿ ಲಿಂಗ ತಾರತಮ್ಯ ನಿವಾರಣೆ ಮತ್ತು ಮಹಿಳಾ ಸಬಲೀಕರಣ ಉದ್ದೇಶದಿಂದ ೨೦೧೫ರಲ್ಲಿ ಭಾರತ ಸರ್ಕಾರ ಬೇಟಿ ಬಚಾವೋ, ಬೇಡಿ ಪಢಾವೋ ಯೋಜನೆ ಪರಿಚಯಿಸಿತು. ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಎಂಬುದು ಇದರ ಅರ್ಥ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮೃತ್ಯುಂಜಯ ಗುಡ್ಡದಾನವೇರಿ ಹೇಳಿದರು.ಶುಕ್ರವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಢಾವೋ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಣ್ಣುಮಕ್ಕಳ ಲಿಂಗ ಅನುಪಾತದ ಕುಸಿತ ತಡೆಯುವುದು. ದೇಶದಲ್ಲಿ ಮಹಿಳಾ ಸ್ಥಾನಮಾನವನ್ನು ಸುಧಾರಿಸುವ ಸಲುವಾಗಿ ಮಹಿಳಾ ಸಬಲೀಕರಣ ಉತ್ತೇಜಿಸುತ್ತದೆ ಎಂದರು.ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ತೊಡೆದುಹಾಕುವುದು ಮತ್ತು ಅವರ ಬಗ್ಗೆ ಜನರಲ್ಲಿ ನಕಾರಾತ್ಮಕ ಮನೋಭಾವ ಬದಲಾಯಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರ ಭಾಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದೆ. ಹೆಣ್ಣುಮಗುವಿಗೆ ಶಿಕ್ಷಣ ಒದಗಿಸಲು ಮತ್ತು ಸಮಾಜದಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಅದೊಂದು ಕಾಲವಿತ್ತು, ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು ಎನ್ನುವ ಮನೋಭಾವ ಬೆಳೆದು, ಹೆಣ್ಣನ್ನು ಸಮಾಜದಲ್ಲಿ ಕೀಳರಿಮೆಯಿಂದ ಕಾಣುವ ಕಾಲವಿತ್ತು. ಆ ಮನೋಭಾವ ಇತ್ತೀಚೆಗೆ ಕಡಿಮೆಯಾಗಿದೆ. ಆದರೂ ಕೆಲವೊಬ್ಬರ ಮನಸ್ಸಿನಲ್ಲಿ ಇಂದಿಗೂ ಹಾಗೆಯೇ ಉಳಿದಿದೆ. ಇದನ್ನು ಹೋಗಲಾಡಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲ ಯೋಜನೆಗಳ ಉದ್ದೇಶ ಮಹಿಳೆಯರ ಲಿಂಗಾನುಪಾತ ಪುರುಷರಿಗೆ ಸಮಾನವಾಗಿ ತರುವುದಾಗಿದೆ ಎಂದರು.

ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಕೂಡ ಪ್ರಮುಖವಾಗಿದೆ. ಕೆಲವು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಹಣದಾಸೆಗೆ ಹೆಣ್ಣು ಶಿಶು ಹತ್ಯೆ ಮಾಡಲಾಗುತ್ತಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮೃತ್ಯುಂಜಯ ಗುಡ್ಡದಾನವೇರಿ, ಕಲಾತಂಡದ ಎಲ್ಲ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Share this article