ಬ್ಯಾಡಗಿ: ರೈತರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡದಿದ್ದರೇ ಜ.26 ಗಣರಾಜ್ಯೋತ್ಸವ ದಿನದಂದು ಯಾವುದೇ ಶಾಸಕರು ಸಚಿವರಿಗೆ ಅವಕಾಶ ನೀಡದೇ ರೈತರೇ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.
ಜ.23 ರಂದು ಜಿಲ್ಲಾಧಿಕಾರಿಗಳ ಕಚೇರಿಯೆದುರು ಆಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಬರಪೀಡಿತ ಎಂದು ಘೋಷಿಸಿ 3 ತಿಂಗಳು ಗತಿಸಿವೆ. ರೈತರು ಎಕರೆಗೆ ₹ 25 ಸಾವಿರ ನೀಡುವಂತೆ ಆಗ್ರಹಿಸುತ್ತಿದ್ದೇವೆ, ಆದರೆ ಈವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಪಾಲೆಷ್ಟು ಎಂಬುದನ್ನು ಘೋಷಿಸಿಲ್ಲ ಬದಲಾಗಿ ಕೇವಲ ₹ 2 ಸಾವಿರ ನೀಡಿ ಸರ್ಕಾರ ಕೈತೊಳೆದುಕೊಂಡಿದೆ ಎಂದು ಆರೋಪಿಸಿದರು.ಎನ್‌ಡಿಆರ್‌ಎಫ್ ಬಗ್ಗೆ ಚಿಂತೆ ಬೇಡ: ಪ್ರಕೃತಿ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್) ಪ್ರತಿ ಹೆಕ್ಟೇರ್‌ಗೆ ₹ 8500 ಕೇಂದ್ರ ಸರ್ಕಾರದಿಂದ ಸಿಗುವ ಸಾಧ್ಯತೆಯಿದೆ, ಅದಕ್ಕೆ ಇನ್ನಷ್ಟು ಸೇರಿಸಿ ಪರಿಹಾರ ನೀಡುವ ಕುರಿತು ಕೇಂದ್ರ ಬಳಿಯೇ ಕೇಳುತ್ತೇವೆ. ಆದರೆ ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪಾಲನ್ನು ಘೋಷಿಸುವಂತೆ ಆಗ್ರಹಿಸಿದರು.
ಮೋಜು ಮಸ್ತಿಯಲ್ಲಿ ಸಚಿವರು: ಮಳೆ ಕೈಕೊಟ್ಟು ಬರಗಾಲ ಘೋಷಣೆ ಆದರೂ ಸಹ ರೈತರಿಗೆ ಸಂಕಷ್ಟ ತಪ್ಪಿಲ್ಲ, ಎಲ್ಲವನ್ನೂ ಹೋರಾಟ ಮಾಡಿಯೇ ರೈತರು ಪರಿಹಾರ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು ನೋವಿನ ಸಂಗತಿ, ರಾಜ್ಯದ ರೈತರು ಸಮಸ್ಯೆಗಳಲ್ಲಿ ಮುಳುಗಿದ್ದಾರೆ, ಆದರೆ ಸರ್ಕಾರದ ಭಾಗವಾಗಿರುವ ಶಾಸಕರು ವಿದೇಶಗಳಿಗೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸಮಸ್ಯೆಗಳ ಆಗರ: ಗಂಗಣ್ಣ ಎಲಿ ಮಾತನಾಡಿ, ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ಮಧ್ಯಂತರ ಬೆಳೆ ಪರಿಹಾರ, 7 ತಾಸು ತ್ರಿಫೇಸ್ ವಿದ್ಯುತ್ ಕೊರತೆ, ಹೊಸ ಕೊಳವೆ ಭಾವಿಗಳಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿದೆ, ಸಮಸ್ಯೆಗಳ ಪರಿಹಾರಕ್ಕೆ ಇನ್ನೆಷ್ಟು ವರ್ಷ ಕಾಯಬೇಕು ಎಂದು ಪ್ರಶ್ನಿಸಿದ ಅವರು, ಸಮಸ್ಯೆಗಳ ಪರಿಹಾರಕ್ಕಾಗಿ ನ. 23 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ರೈತ ಮುಖಂಡರಾದ ಮೌನೇಶ ಕಮ್ಮಾರ, ಪ್ರವೀಣ ಬಡ್ಡಿ, ಜಾನ್ ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.