
ಕಾರವಾರ: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ. ಸುಧೀಂದ್ರ ಬುಧವಾರ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿರುವ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಮಂಡಳಿಯ ಅಧ್ಯಕ್ಷ ಸುಧೀಂದ್ರ ಅವರು ಮಾತನಾಡಿ, ರಾಜ್ಯದಲ್ಲಿ ಜೈವಿಕ ಇಂಧನ ಉದ್ಯಾನಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದು ನೂತನ ಜೈವಿಕ ಇಂಧನ ನೀತಿ ರಚನೆಗೆ ಹಾಗೂ ಈ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಪೂರಕವಾಗಿದೆ, ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಅವರು ಮಾತನಾಡಿ, ಜೈವಿಕ ಇಂಧನ ಕೇಂದ್ರವು ಜಿಲ್ಲಾ ವಿಜ್ಞಾನ ಕೇಂದ್ರದ ಆವರಣದಲ್ಲಿಯೇ ಇರುವುದರಿಂದ ಕಾರವಾರ ಮಾತ್ರವಲ್ಲದೆ ನೆರೆಯ ಗೋವಾ ರಾಜ್ಯದ ವಿದ್ಯಾರ್ಥಿಗಳಿಗೂ ಇದರ ಲಾಭ ಸಿಗುತ್ತಿದೆ. ಜೈವಿಕ ಇಂಧನದ ಮಹತ್ವ, ಸಂಶೋಧನೆ ಮತ್ತು ಬಯೋಡೀಸೆಲ್ ಉತ್ಪಾದನೆಯನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಯಲು ಈ ಕೇಂದ್ರವು ಉತ್ತಮ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಎಲ್., ಜಿಪಂ ಉಪ ಕಾರ್ಯದರ್ಶಿ ಅಲ್ಲಾಬಕ್ಷ್, ಮರೈನ್ ಇಕೋ ಸಿಸ್ಟಮ್ ಸೆಲ್‌ನ ವಲಯ ಅರಣ್ಯ ಅಧಿಕಾರಿ ಕಿರಣ್ ಮಾನವಾಚಾರಿ, ಕೇಂದ್ರದ ಸಂಯೋಜಕ ರೋಹನ್ ಬುಜಲೆ ಹಾಗೂ ಸಿಬ್ಬಂದಿ ನಿಧಿ ನಾಯಕ್ ಉಪಸ್ಥಿತರಿದ್ದರು.