ಭದ್ರೆಗೆ ಹಣ ನೀಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಉದಾಸೀನ

KannadaprabhaNewsNetwork |  
Published : Jan 18, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಪಿ.ಕೋದಂಡರಾಮಯ್ಯ ಮಾತನಾಡಿದರು. ಪ್ರೊ.ರವಿವರ್ಮ ಕುಮಾರ್ ಸೇರಿದಂತೆ ರೈತ ಮುಖಂಡರು ಇದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದಾಸೀನ ತೋರುತ್ತಿವೆ ಎಂದು ಮಾಜಿ ಸಂಸದ ಹಾಗೂ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಆರೋಪಿಸಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಯೋಜನೆ ಜಾರಿಗೊಂಡು 16 ವರ್ಷ ಪೂರೈಸುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದಿರುವುದು ಅತ್ಯಂತ ಬೇಸರದ ವಿಷಯ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಜಾರಿಯಿಂದ ಲಕ್ಷಾಂತರ ಜನರ ಬದುಕು ಹಸನುಗೊಳ್ಳಲಿದೆ. ಆದರೆ, ಯೋಜನೆ ಜಾರಿ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಮಧ್ಯೆ ಇರುವ ಕಂದಕ ಬಯಲುಸೀಮೆ ಜನರನ್ನು ಸಂಕಷ್ಟಕ್ಕೆ ಸಿಲುಕಿದೆ. ಚುನಾವಣೆ ಸಂದರ್ಭ ನರೇಂದ್ರ ಮೋದಿ, ಬಜೆಟ್‌ನಲ್ಲಿ 5300 ಕೋಟಿ ರು. ಯೋಜನೆಗೆ ಘೋಷಿಸಿದ್ದರೂ ಇಲ್ಲಿಯವರೆಗೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅವಲೋಕಿಸಿದರೆ ಎಲ್ಲವೂ ಕೇಂದ್ರದ ಹಿಡಿತದಲ್ಲಿದೆ. ಅದರಲ್ಲೂ ಈಚೆಗೆ ನರೇಗಾ ಯೋಜನೆ ಹೆಸರು ಬದಲಾವಣೆ ಜೊತೆಗೆ ರಾಜ್ಯ ಸರ್ಕಾರದ ಮೇಲೆ ಹೆಚ್ಚು ಆರ್ಥಿಕ ಹೊರೆ ಹಾಕಲಾಗಿದೆ. ಹೀಗೆ ವಿವಿಧ ರೀತಿ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರದ ಸವಾರಿ ಮಾಡುತ್ತಿದೆ. ಇದರಿಂದ ರಾಜ್ಯಗಳ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದರು.

ರಾಷ್ಟ್ರದ ಬಹುದೊಡ್ಡ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ದಿನದಿಂದ ದಿನಕ್ಕೆ ವೆಚ್ಚ ಹೆಚ್ಚಾಗುತ್ತಿದೆ. 5 ರಿಂದ 21 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಇಂತಹ ವೇಳೆ ಕೊಟ್ಟ ಮಾತಿನಂತೆ ಹಾಗೂ ಬಜೆಟ್ ಘೋಷಿಸಿದಂತೆ ಕೇಂದ್ರ ಸರ್ಕಾರ 5300 ಕೋಟಿ ರು. ಬಿಡುಗಡೆ ಮಾಡಿದ್ದರೆ ಕಾಮಗಾರಿ ವೇಗ ಪಡೆದುಕೊಳ್ಳುತ್ತಿತ್ತು ಎಂದು ಹೇಳಿದರು.

ಪ್ರೊ.ರವಿವರ್ಮಕುಮಾರ್ ಮಾತನಾಡಿ, ನ್ಯಾಯಾಲಯದ ಮೆಟ್ಟೀಲು ಏರಿ ಹೇಮಾವತಿ ನೀರನ್ನು ಶಿರಾಕ್ಕೆ ಕೊಡಿಸಿದ್ದೇನೆ. ಅದೇ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿ ಸಲ್ಲಿಸಬಹುದೇ ಎಂಬ ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೇಕಾಗಿದೆ ಎಂದರು.

ರಾಜ್ಯದ 28 ಸಂಸದರು ಲೋಕಸಭೆಯಲ್ಲಿ ಯೋಜನೆ ಕುರಿತು ಧ್ವನಿಯೆತ್ತಿದರೆ 5300 ಕೋಟಿ ರು. ಬಿಡುಗಡೆ ಖಚಿತ. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ತರುವ ರೀತಿ ಹೋರಾಟ ರೂಪಿಸಬೇಕು ಎಂದರು.

ರೈತಸಂಘದ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಹೊರಕೇರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮುಖಂಡರಾದ ಜಿ.ಎಸ್.ಉಜ್ಜನಪ್ಪ, ಆರ್.ಶೇಷಣ್ಣಕುಮಾರ್, ಡಿ.ದುರುಗೇಶ್, ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ರಾಘವೇಂದ್ರ ನಾಯ್ಕ, ಕೂನಿಕೆರೆ ರಾಮಣ್ಣ, ಸಂಪತ್‌ಕುಮಾರ್, ಟಿ.ಶಫಿಉಲ್ಲಾ, ತಿಪ್ಪೀರಯ್ಯ, ವದ್ದಿಕೆರೆ ಕಾಂತರಾಜ್ ಸುದ್ದಿಗೋಷ್ಠಿಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ
ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲು ಕ್ರಮ