ಭಾಷಾಭಿವೃದ್ಧಿಗೆ ಅನುದಾನ ನೀಡುವಲ್ಲಿ ಕೇಂದ್ರ ತಾರತಮ್ಯ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಕನ್ನಡಕ್ಕೆ 2000 ವರ್ಷಗಳ ದೀರ್ಘ ಇತಿಹಾಸವಿದೆ. ಆದರೆ ಕೆಲವೇ ವರ್ಷಗಳ ಇತಿಹಾಸ ಹೊಂದಿರುವ ಇತರ ರಾಜ್ಯಗಳ ಭಾಷೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರಕುತ್ತಿದೆ. ಆ ಮೂಲಕ ಕನ್ನಡ ಭಾಷಾಭಿವೃದ್ಧಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕೇಂದ್ರ ಸರ್ಕಾರವು ಕನ್ನಡ ಆಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸದೆ ವಂಚನೆ ಮಾಡುತ್ತಿದೆ ಎಂದು ಕಸಾಪ ನಿಕಟಪೂರ್ವ ರಾಜ್ಯಾಧ್ಯಕ್ಷ ಮನು ಬಳಿಗಾರ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯ ಶುಕ್ರವಾರ ಎಚ್.ಜಿ. ರಾಜ್‌ ಸಭಾಂಗಣದಲ್ಲಿ ಅಯೋಜಿಸಿದ್ದ ಕನ್ನಡೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ರಾಜ್ಯದ 25 ಸಂಸದರು ಆಡಳಿತ ಪಕ್ಷದವರಾಗಿದ್ದರೂ ಕನ್ನಡ ಅಭಿವೃದ್ಧಿಗೆ ಕೇಂದ್ರದಿಂದ ಕೇವಲ ₹1.5 ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಮಿಳುನಾಡಿನ ಒಬ್ಬನೇ ಸಂಸದ ಆ ರಾಜ್ಯದ ಭಾಷಾಭಿವೃದ್ಧಿಗೆ ₹800 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಂದಿದ್ದಾರೆ. ಅನುದಾನ ನೀಡಿಕೆಯಲ್ಲಿ ರಾಜ್ಯಕ್ಕೆ ದೊಡ್ಡ ತಾರತಮ್ಯ ತೋರಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಕನ್ನಡಕ್ಕೆ 2000 ವರ್ಷಗಳ ದೀರ್ಘ ಇತಿಹಾಸವಿದೆ. ಆದರೆ ಕೆಲವೇ ವರ್ಷಗಳ ಇತಿಹಾಸ ಹೊಂದಿರುವ ಇತರ ರಾಜ್ಯಗಳ ಭಾಷೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರಕುತ್ತಿದೆ. ಆ ಮೂಲಕ ಕನ್ನಡ ಭಾಷಾಭಿವೃದ್ಧಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ದೂರಿದರು.

ನಾನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹೊಸ ತಂತ್ರಾಂಶವನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಅವಕಾಶಗಳು ದೊರೆಯುವಂತೆ ಮಾಡಿದ್ದೇನೆ ಎಂದರು.

ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ಕನ್ನಡ ಮಾಧ್ಯಮ ಕಲಿತವರೇ ರಾಜ್ಯದ ಮುಖ್ಯ ಮಂತ್ರಿ ಸ್ಥಾನ ಅಲಂಕರಿಸುವ ಪರಂಪರೆ ಮುಂದುವರಿದಿರುವುದು ರಾಜ್ಯದ ಹೆಮ್ಮೆಯ ವಿಷಯ. ಇಂಗ್ಲಿಷ್‌ ಮಾಧ್ಯಮ ಸ್ವೀಕರಿಸಿದವರಿಂದ ವೃದ್ಧಾಶ್ರಮ ಸಂಸ್ಕೃತಿ ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದರು.

ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಿದ್ದರಾಮ ಕಲ್ಮಠ್, ಕಸಾಪ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಎಂ. ಮಂಜುನಾಥ ಮಾತನಾಡಿದರು. ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಎಸ್.ಎಂ. ಗುರುಪ್ರಸಾದ್, ಡಿ.ಎಸ್. ಶಿವಮೂರ್ತಿ, ಕೋರಿ ಬಸವರಾಜ್, ಕೆ.ಬಿ. ಮಲ್ಲಿಕಾರ್ಜುನ,ಅಡಿಕಿ ಮಂಜುನಾಥ ಪಾಲ್ಗೊಂಡಿದ್ದರು. ಪ್ರಾಚಾರ್ಯ ರವಿಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ರೇವಣ್ಣ ವಂದಿಸಿದರು, ಉಪನ್ಯಾಸಕಿ ವಿಜಯ ಲಕ್ಷ್ಮೀ ನಿರೂಪಿಸಿದರು.

Share this article