ಬರ ಹಿನ್ನೆಲೆಯಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ । ಆರ್‌ಜಿ ಹಳ್ಳಿಯಲ್ಲಿ 70ನೇ ಸಹಕಾರ ಸಪ್ತಾಹ
ರೈತರ ಅಲ್ಪಾವಧಿ ಕೃಷಿ ಚಟುವಟಿಕೆಗೆ ತೊಡಗಿಸಿಕೊಳ್ಳಲು ಆದಾಯ ಮೂಲವನ್ನು ಒದಗಿಸುವ ಸಹಕಾರ ಕ್ಷೇತ್ರವು ಇಂದು ಎಲ್ಲಾ ಆರ್ಥಿಕ ವಲಯದಲ್ಲೂ ತನ್ನ ಛಾಪು ಮೂಡಿಸಿದ್ದು, ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿದರೆ ಮಾತ್ರ ಸಹಕಾರ ಕ್ಷೇತ್ರ ಉಳಿಯಲು, ಬೆಳೆಯಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ ನಿ. ಬೆಂಗಳೂರು, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಶಿಮುಲ್, ರಾಮಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘ, ದಾವಣಗೆರೆ ತಾ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳು, ತಾಲೂಕಿನ ನೀರು ಬಳಕೆದಾರರ ಸಹಕಾರ ಸಂಘಗಳು, ಇಫ್ಕೋ ಲಿ., ಕ್ರಿಬ್ಕೋ ಲಿ., ಟಿಎಪಿಸಿಎಂಎಸ್ ಲಿ., ತಾಲೂಕು ಪೀಕಾರ್ಡ್ ಬ್ಯಾಂಕ್ ಲಿಮಿಟೆಡ್, ಇತರೆ ಎಲ್ಲಾ ಸಹಕಾರ ಸಂಘಗಳಿಂದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ 3ನೇ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿ ಪರಸ್ಪರ ಸಹಕಾರ ಮನೋಭಾವವು ಪ್ರತಿಯೊಬ್ಬರಲ್ಲೂ ಇದ್ದಾಗ ಮಾತ್ರ ಸಹಕಾರ ಸಂಘಗಳು ಮತ್ತಷ್ಟು ರೈತರ ತಲುಪಲು ಸಾಧ್ಯ. ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಈ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳು ತಮ್ಮ ಸದಸ್ಯರ ನೆರವಿಗೆ ಧಾವಿಸಬೇಕು. ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೇಂದ್ರ ಬರ ಅಧ್ಯಯನ ತಂಡ, ಸಿಎಂ ಜೊತೆಗೆ ಚರ್ಚಿಸಿ, ಮಾಯಕೊಂಡ ಕ್ಷೇತ್ರವನ್ನು ಬರ ಪೀಡಿತಪಟ್ಟಿಗೆ ಸೇರಿಸಿದೆ. ರೈತರು ಬೆಳೆ ವಿಮೆ, ಸರ್ಕಾರದ ಬರ ಪರಿಹಾರ ಪಡೆಯಬಹುದು ಎಂದರು.ಆರ್ಥಿಕ ಸಬಲತೆಗೂ ಆಸರೆ:
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಗದೀಶಪ್ಪ ಬಣಕಾರ್ ಮಾತನಾಡಿ, ಸರ್ಕಾರವು ಹೈನುಗಾರಿಕೆ ಕ್ಷೇತ್ರಕ್ಕೆ ಅನೇಕ ರೀತಿಯ ಸಹಾಯಧನ ನೀಡುತ್ತಿದೆ. ಪ್ರತಿ ಲೀಟರ್ ಹಾಲಿಗೆ 5 ರು. ಪ್ರೋತ್ಸಾಹಧನ ನೀಡುತ್ತಿದೆ. ಕೃಷಿಯೊಂದಿಗೆ ಹೈನುಗಾರಿಕೆಗೂ ರೈತಾಪಿ ಕುಟುಂಬಗಳು, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಗಮನಹರಿಸಲು ಇದರಿಂದ ಸಹಕಾರಿಯಾಗಿದೆ. ಎಷ್ಟೋ ಕುಟುಂಬಗಳಿಗೆ ಹೈನುಗಾರಿಕೆಯೇ ಜೀವನಾಧಾರವೂ ಆಗಿದೆ ಎಂದು ತಿಳಿಸಿದರು.
ಶ್ರೀನಿವಾಸ, ಅಧ್ಯಕ್ಷ, ರಾಮಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘಎಲ್ಲಾ ಸಹಕಾರ ಸಂಘಗಳು ಡಿಜಿಟಲೀಕರಣ ಹೊಂದಬೇಕು. ಆಗ ಮಾತ್ರ ಸದಸ್ಯರಿಗೆ ಯಾವುದೇ ತೊಂದರೆ ಇಲ್ಲದೇ, ಸೌಲಭ್ಯ ಒದಗಿಸಲು ಸಾಧ್ಯ. ಸಹಕಾರ ಸಂಘಗಳ ಆಡಳಿತ ಮಂಡಳಿಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದರೆ, ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿದೆ. 70ನೇ ಸಹಕಾರ ಸಪ್ತಾಹ ಕಾರ್ಯಕ್ರಮಗಳು ಗ್ರಾಮದ ಕಟ್ಟಕಡೆ ವ್ಯಕ್ತಿಗೂ ತಲುಪುತ್ತಿರುವುದು ಮಾದರಿ ಕಾರ್ಯ.ಎಚ್.ಕೆ.ಬಸಪ್ಪ, ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಉಪಾಧ್ಯಕ್ಷ