ಹರಪನಹಳ್ಳಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಒಣಗಿದ ಬೆಳೆಗಳ ದರ್ಶನ

KannadaprabhaNewsNetwork |  
Published : Oct 06, 2026, 02:15 AM IST
ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದ ಬಳಿ ಜಮೀನಿನಲ್ಲಿ  ಒಣಗಿದ ಬೆಳೆ ಪರಿಶೀಲಿಸಿದ ಕೇಂದ್ರ ಬರ ಅಧ್ಯಯನ ತಂಡ ದ ಸದಸ್ಯರು, ಅಧಿಕಾರಿಗಳು  | Kannada Prabha

ಸಾರಾಂಶ

ಚಿಗಟೇರಿ ಹೋಬಳಿಯ ಮೈದೂರು ಗ್ರಾಮಕ್ಕೆ ಭೇಟಿ ನೀಡಿದ ತಂಡ ನೀರಿನ ಕೊರತೆಯಿಂದ ಕಮರಿ ಹೋಗಿರುವ ಮೆಕ್ಕೆಜೋಳ, ರಾಗಿ, ನೆಲಗಡಲೆ, ಸೂರ್ಯಕಾಂತಿ ಮತ್ತು ಈರುಳ್ಳಿ ಬೆಳೆಗಳ ಜಮೀನುಗಳಿಗೆ ನೇರವಾಗಿ ಇಳಿದು ಬೆಳೆ ಹಾನಿಯ ತೀವ್ರತೆ ವೀಕ್ಷಿಸಿತು.

ಹರಪನಹಳ್ಳಿ: ತಾಲೂಕಿನಲ್ಲಿ ಸೋಮವಾರ ಕೇಂದ್ರ ಬರ ಅಧ್ಯಯನ ತಂಡ ಸುತ್ತಾಟ ನಡೆಸಿದಾಗ ಒಣಗಿದ ಬೆಳೆಗಳ ದರ್ಶನವಾಗಿ ರೈತರು ಬೆಳೆ ಹಾನಿಯಿಂದ ಆಗಿರುವ ಸಂಕಷ್ಟ ತೋಡಿಕೊಂಡರು.

ತಾಲೂಕಿನಾದ್ಯಂತ ಆವರಿಸಿರುವ ತೀವ್ರ ಬರ ಪರಿಸ್ಥಿತಿ ಹಾಗೂ ವ್ಯಾಪಕ ಬೆಳೆ ನಷ್ಟದ ನೈಜ ಚಿತ್ರಣ ಕಣ್ಣಾರೆ ಕಂಡು ಮಾಹಿತಿ ಪಡೆಯಲಾಯಿತು.

ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು, ನೀತಿ ಆಯೋಗದ ಅಮರಿಂದರ್ ಸಿಂಗ್ ಹಾಗೂ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ನಿರ್ದೆಶಕ ಡಾ.ಜೆ.ಹರ್ಷ ಅವರನ್ನೊಳಗೊಂಡ ಕೇಂದ್ರ ತಜ್ಞರ ನಿಯೋಗ ಬೆಳಗ್ಗೆ 9.30ಕ್ಕೆ ತಾಲೂಕಿನ ಗಡಿ ಭಾಗ ದುಗ್ಗಾವತ್ತಿ ಬಳಿ ಆಗಮಿಸಿದಾಗ ತಾಲೂಕಾಡಳಿತ ಅವರನ್ನು ಬರಮಾಡಿಕೊಂಡರು.

ಅಲ್ಲಿಂದ ನೇರವಾಗಿ ನೀಲಗುಂದ ಗ್ರಾಮದ ಕೆರೆ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿ ವೀಕ್ಷಿಸಿ ಅಂತರಜಲ ಮಟ್ಟ ಹಾಗೂ ನೀರಿನ ಸಂಗ್ರಹದ ಕುರಿತು ಮಾಹಿತಿ ಪಡೆಯಿತು.

ಚಿಗಟೇರಿ ಹೋಬಳಿಯ ಮೈದೂರು ಗ್ರಾಮಕ್ಕೆ ಭೇಟಿ ನೀಡಿದ ತಂಡ ನೀರಿನ ಕೊರತೆಯಿಂದ ಕಮರಿ ಹೋಗಿರುವ ಮೆಕ್ಕೆಜೋಳ, ರಾಗಿ, ನೆಲಗಡಲೆ, ಸೂರ್ಯಕಾಂತಿ ಮತ್ತು ಈರುಳ್ಳಿ ಬೆಳೆಗಳ ಜಮೀನುಗಳಿಗೆ ನೇರವಾಗಿ ಇಳಿದು ಬೆಳೆ ಹಾನಿಯ ತೀವ್ರತೆ ವೀಕ್ಷಿಸಿತು. ಇದೇ ವೇಳೆ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿನ ಕೊರತೆಯ ಬಗ್ಗೆಯೂ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿತು.

ಮೊದಲಿಗೆ ಆನಂದಗೌಡ ಎಂಬ ರೈತನ ಜಮೀನಿಗೆ ತೆರಳಿ ಮೆಕ್ಕೆಜೋಳ ಬೆಳೆ ಒಣಗಿ ₹2.99 ಲಕ್ಷ ನಷ್ಟ ಸಂಭವಿಸಿದೆ ಎಂದು ರೈತ ವಿವರಿಸಿದ, ಕೊಟ್ರೇಶಪ್ಪ ಎಂಬ ರೈತ ಈರುಳ್ಳಿ ಹಾಗೂ ಸೂರ್ಯ ಕಾಂತಿ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿದೆ ನೀವೆ ನೋಡಿ ಎಂದು ತೋರಿಸಿ ಇದರಿಂದ ₹7 ಲಕ್ಷ ನಷ್ಟ ಆಗಿದೆ ಎಂದು ಅಳಲು ತೋಡಿಕೊಂಡನು.

ಚಿಗಟೇರಿ ಗ್ರಾಮದಲ್ಲಿ ಚೆನ್ನಬಸಪ್ಪನ ಈರುಳ್ಳಿ ಒಣಗಿದ್ದು, ಹಾಲಮ್ಮ ಎಂಬುವವರ ರಾಗಿ ಒಣಗಿ ಹಾಳಾಗಿದೆ ಇದರಿಂದ ಲಕ್ಷಾಂತರ ನಷ್ಟ ಆಗಿದೆ ಎಂದು ರೈತರು ಗೋಳಾಡಿದರು.

ಜಿಲ್ಲೆಯಲ್ಲೇ ಹರಪನಹಳ್ಳಿಗೆ ಗರಿಷ್ಠ ಪೆಟ್ಟು: ಅಧಿಕಾರಿಗಳ ವಿವರಣೆ

ಪರಿಶೀಲನೆ ವೇಳೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಾಲೂಕಿನ ಭೀಕರ ಬರ ಪರಿಸ್ಥಿತಿಯ ಅಂಕಿ-ಅಂಶ ಕೇಂದ್ರ ತಂಡದ ಗಮನಕ್ಕೆ ತಂದರು. ಹರಪನಹಳ್ಳಿ ತಾಲೂಕೊಂದರಲ್ಲೇ ಬರೋಬ್ಬರಿ 83.88 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದ್ದು, ಜಿಲ್ಲೆಯಲ್ಲೇ ಇದು ಗರಿಷ್ಠವಾಗಿದೆ ಎಂದು ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ ಶೇ.62 ರಷ್ಟು ಮಳೆ ಕೊರತೆಯಾಗಿದ್ದು, ಹರಪನಹಳ್ಳಿ ತಾಲೂಕಿನ ಬೆಳೆ ಹಾನಿಗಾಗಿ ₹65.80 ಕೋಟಿ ಪರಿಹಾರ ನೀಡಬೇಕೆಂದು ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರು.

ಮೈದೂರು ಸೇರಿದಂತೆ ಭೇಟಿ ನೀಡಿದ ಗ್ರಾಮಗಳ ರೈತರು ನಿಯೋಗದ ಮುಂದೆ ತಮ್ಮ ಸಂಕಷ್ಟ ತೋಡಿಕೊಂಡರು. ಮಳೆ ಕೈಕೊಟ್ಟಿದ್ದರಿಂದ ಸಾಲ ಮಾಡಿ ಬಿತ್ತಿದ್ದ ಬೀಜ, ಗೊಬ್ಬರದ ರೊಕ್ಕ ಕೈ ಸೇರದೆ ಕಂಗಾಲಾಗಿದ್ದೇವೆ ಎಂದು ಅಲವತ್ತುಕೊಂಡ ರೈತರು, ಎಕರೆಗೆ ಕನಿಷ್ಠ ₹ 25 ಸಾವಿರ ಸಾವಿರ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಗರೀಮಾ ಪನ್ವಾರ್ , ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಉಪವಿಭಾಗಾಧಿಕಾರಿ ಸುರೇಶಕುಮಾರ, ತಹಸೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಕಾರ್ಯನಿರ್ವಾಹಣಾಧಿಕಾರಿ ವೈ.ಎಚ್. ಚಂದ್ರಶೇಖರ, ವಿಬಿಜಿ ರಾಮ್‌ ಜಿ ನಿರ್ದೇಶಕ ಸೋಮಶೇಖರ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಇ ದೀಪ, ಸಹಾಯಕ ಕೃಷಿ ನಿರ್ದೆಶಕ ಮಹಮದ್ ಆಶ್ರಪ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಕರೆಗೆ ₹50 ಸಾವಿರ ಪರಿಹಾರ ಕೊಡಿ
ಗ್ರಾಮೀಣ ಪ್ರಥಮ ಚಿಕಿತ್ಸಕರ ಸೇವೆ ಶ್ಲಾಘನೀಯ