ಕೇಂದ್ರ ಸರ್ಕಾರದಿಂದ ಉದ್ಯೋಗ ಖಾತ್ರಿ ಯೋಜನೆ ಬದಲಾಣೆಗೆ ಖಂಡನೆ

KannadaprabhaNewsNetwork |  
Published : Dec 26, 2025, 01:30 AM IST
25ಕೆಎಂಎನ್ ಡಿ12 | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ದುರ್ಬಲಗೊಳಿಸುವ ಹುನ್ನಾರದಿಂದ ಮಹಾತ್ಮ ಗಾಂಧೀಜಿಯವರ ಹೆಸರನ್ನು ಬದಲಾಯಿಸಿ ವಿಬಿ-ಜಿ-ರಾಂ ಜೀ ಹೆಸರಿನಲ್ಲಿ ಹೊಸ ಶಾಸನ ತರಲು ಹೊರಟಿದೆ. ಇದನ್ನು ಖಂಡಿಸಿ ಡಿ.26 ರಿಂದ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಪಂಗಳ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ದುರ್ಬಲಗೊಳಿಸುವ ಹುನ್ನಾರದಿಂದ ಮಹಾತ್ಮ ಗಾಂಧೀಜಿಯವರ ಹೆಸರನ್ನು ಬದಲಾಯಿಸಿ ವಿಬಿ-ಜಿ-ರಾಂ ಜೀ ಹೆಸರಿನಲ್ಲಿ ಹೊಸ ಶಾಸನ ತರಲು ಹೊರಟಿದೆ. ಇದನ್ನು ಖಂಡಿಸಿ ಡಿ.26 ರಿಂದ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಪಂಗಳ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.

ಇಲ್ಲಿನ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗಾಂಧೀಜಿರವರ ಹೆಸರು ತೆಗೆದು ಹಾಕಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) (VB-G- RAM G) ಹೆಸರಿನಲ್ಲಿ ರಾಜಕೀಯಕ್ಕಾಗಿ ಕಾಯ್ದೆ ತರಲು ಹೊರಟಿರುವುದು ಸರಿಯಲ್ಲ ಎಂದರು.

ಈ ಹಿಂದೆ ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯಡಿ ಶೇ.90ರಷ್ಟು ಕೂಲಿ ಹಣವನ್ನು ನೀಡುತ್ತಿತ್ತು. ಆದರೆ, ಹೊಸ ಮಸೂದೆಯಲ್ಲಿ ಶೇ.60ರಷ್ಟು ಹಣವನ್ನು ಕೇಂದ್ರ ಸರ್ಕಾರ ಉಳಿದ ಶೇ.40ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ಹೇಳಿತ್ತು. ಅಲ್ಲದೇ, ಈ ಕಾಯ್ದೆಯಲ್ಲಿ ಕೂಲಿಕಾರರು ಆಯ ರಾಜ್ಯಗಳಲ್ಲಿ ಯಾವುದಾದರೂ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿ ಈಗ ಕೂಲಿಕಾರರ ಉದ್ಯೋಗದ ಹಕ್ಕನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಯೋಜನೆಗೆ ಹೊಸ ಆಯಾಮ ತಂದು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಹೋರಾಟಗಳನ್ನು ತೇಜೋವಧೆ ಮಾಡಿ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಲು ಹೊರಟಿದೆ. ಇದರಿಂದ ಗ್ರಾಮೀಣ ಭಾಗದ ಕೂಲಿಕಾರರು ಇನ್ನಷ್ಟು ಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಈ ಹಿಂದೆ ಕೃಷಿ ಕೂಲಿ ಕಾರ್ಮಿಕರಿಗೆ ಇದ್ದ 370 ರು. ಕೂಲಿಯನ್ನು 240 ರುಪಾಯಿಗೆ ಇಳಿಸಿ ಕಾರ್ಮಿಕರಿಗೆ ವಂಚಿಸಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ಎಲ್ಲಾ ಗ್ರಾಪಂಗಳ ಎದುರು ಡಿ.26 ರಂದು ಕೃಷಿ ಕೂಲಿ ಕಾರ್ಮಿಕರು ಹೋರಾಟ ನಡೆಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ತಾಲೂಕು ಅಧ್ಯಕ್ಷ ಟಿ.ಎಚ್.ಆನಂದ, ಮದ್ದೂರು ತಾಲೂಕು ಅಧ್ಯಕ್ಷ ಟಿ.ಪಿ.ಅರುಣ್ ಕುಮಾರ್, ಉಪಾಧ್ಯಕ್ಷ ಗಾಳಿ ಹೊನ್ನಯ್ಯ, ಕಾರ್ಯದರ್ಶಿ ಶೋಭಾ, ಭಾರತಿನಗರ ವಲಯ ಸಮಿತಿ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಉಪಾಧ್ಯಕ್ಷರಾದ ಟಿ.ಶಿವಸಂತ ಗೋಪಾಲಸ್ವಾಮಿ, ಶಂಕರ, ಚಂದ್ರಕಲಾ, ಗೌರಮ್ಮ, ಪ್ರಮೀಳಾ,ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣೆಯೂ ಶಾಲೆಯ ಜವಾಬ್ದಾರಿ
ಶಿವಮೊಗ್ಗ: ಏಸು ಕ್ರಿಸ್ತನ ಸ್ಮರಣೆ ಸಂಭ್ರಮ