ಹೆಣ್ಣುಮಕ್ಕಳ ಸಬಲೀಕರಣಕ್ಕೆ ಕೇಂದ್ರ ಹಲವು ಯೋಜನೆ: ಕೇಂದ್ರ ಸಚಿವ ಹರ್ದೀಪ್ ಪುರಿ

KannadaprabhaNewsNetwork |  
Published : Jan 09, 2024, 02:00 AM IST
8ಎಚ್ಎಸ್ಎನ್13 : ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ವಿಕಸನ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಎಸ್.ಪುರಿ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಹೆಣ್ಣುಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಸದಾ ಶ್ರಮಿಸುತ್ತಿದ್ದು, ಹೆಣ್ಣುಮಕ್ಕಳ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದ್ದಂತೆ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಎಸ್.ಪುರಿ ಹೊಳೆನರಸೀಪುರ ತಾಲೂಕಿನ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯಡಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳೇಕೋಟೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪ್ರಧಾನಿ ನರೇಂದ್ರ ಮೋದಿಜೀಯವರ ಆಡಳಿತದಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಯೋಜನೆಗಳು ಎಲ್ಲಾ ಜಾತಿ, ಧರ್ಮ ಹಾಗೂ ಲಿಂಗಗಳಿಗೂ ಅನ್ವಯಿಸುವಂತಹ ಯೋಜನೆಗಳಾಗಿದೆ. ಜತೆಗೆ ವಿಶೇಷವಾಗಿ ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಸದಾ ಶ್ರಮಿಸುತ್ತಿದ್ದು, ಹೆಣ್ಣುಮಕ್ಕಳ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದ್ದಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಎಸ್.ಪುರಿ ತಿಳಿಸಿದರು.

ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘೨೦೧೪ರಲ್ಲಿ ೧೪ ಕೋಟಿ ಅನಿಲ ಸಂಪರ್ಕ ನೀಡಲಾಗಿತ್ತು ಮತ್ತು ಬಿಜೆಪಿ ಕೇಂದ್ರ ಸರ್ಕಾರದ ಆಡಳಿತದ ಚುಕ್ಕಾಣಿ ಹಿಡಿದ ನಂತರ ೩೨ ಕೋಟಿಗೂ ಅಧಿಕ ಸಂಪರ್ಕ ನೀಡಿದೆ. ಜತೆಗೆ ೧೦ ಕೋಟಿಗೂ ಅಧಿಕ ಮಹಿಳೆಯರು ಉಜ್ವಲ್ ಯೋಜನೆಯಡಿ ಉಚಿತ ಸಂಪರ್ಕ ಹೊಂದಿದ್ದಾರೆ. ಉಜ್ವಲ್ ಯೋಜನೆ ಪಡೆಯದ ಮಹಿಳೆಯರು ನಿಮ್ಮ ಹತ್ತಿರವೇ ನಮ್ಮ ಅಧಿಕಾರಿಗಳು ಬಂದು ನಿಮಗೆ ಸಂಪರ್ಕ ನೀಡುತ್ತಾರೆ’ ಎಂದು ಭರವಸೆ ನೀಡಿದರು.

ಅಂತ್ಯೋದಯ ಯೋಜನೆಯಡಿ ೮೦ ಕೋಟಿಗೂ ಅಧಿಕ ಜನರಿಗೆ ಉಚಿತವಾಗಿ ಆಹಾರವನ್ನು ನೀಡುವ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಆಯುಷ್ಮಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ೫ ಲಕ್ಷ ರು. ತನಕ ಆಸ್ವತ್ರೆಯ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.

ಮೋದಿಯವರ ಆಡಳಿತದಲ್ಲಿ ೧೧ ಕೋಟಿ ಶೌಚಾಲಯಗಳ ನಿರ್ಮಾಣವು ವಿಶೇಷವಾಗಿ ಹೆಣ್ಣು ಮಕ್ಕಳ ಕ್ಷೇಮ ಮತ್ತು ಸ್ವಾಭಿಮಾನದ ದೃಷ್ಟಿಯಿಂದ ಯೋಜನೆ ರೂಪಿಸಲಾಗಿತ್ತು. ಪ್ರಧಾನಮಂತ್ರಿ ಅವಾಝ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಸುಮಾರು ೪ ಕೋಟಿಗೂ ಅಧಿಕ ಜನರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ ಮತ್ತು ಇದರಲ್ಲಿ ಶೇ. ೭೧ ರಷ್ಟು ಮಹಿಳೆಯರೇ ಈ ಮನೆಗಳಿಗೆ ಮಾಲೀಕರಾಗಿದ್ದಾರೆ ಎಂದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನವೂ ಪ್ರತಿಯೊಂದು ಹಳ್ಳಿ ಹಾಗೂ ನಗರ ಪ್ರದೇಶದ ವಾರ್ಡ್‌ಗಳಿಗೆ ಸಂಚರಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ ಮತ್ತು ಯೋಜನೆಗಳ ಸೌಲಭ್ಯಗಳನ್ನು ಪಡೆಯದೇ ಇರುವ ಅರ್ಹ ಫಲಾನುಭವಿಗಳು ಸ್ಥಳದಲ್ಲೇ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯಬಹುದು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಶ್ರಮಿಸುವ ಮೂಲಕ ಯೋಜನೆಗಳನ್ನು ಜನರಿಗೆ ತಲುಪಿಸುವ ಜತೆಗೆ ಕೇಂದ್ರದಲ್ಲಿ ಮೂರನೇ ಸಲವೂ ಮೋದಿಯವರ ಆಡಳಿತಕ್ಕೆ ತಕ್ಕ ವಾತವರಣ ಮತ್ತು ಪ್ರತಿಯೊಬ್ಬರೂ ಮತದಾನದಲ್ಲಿ ಭಾಗಿಯಾಗಲು ತಿಳಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ಕರ್ನಾಟಕದ ಅಳಿಯನಾದ ನಾನು, ಮುರುಡೇಶ್ವರ ತನ್ನ ಪತ್ನಿಯ ತವರೂರಾಗಿದ್ದು, ತಾನು ತನ್ನ ಮಾವನ ಮನೆಗೆ ಬಂದಿದ್ದು, ನನಗೆ ಕರ್ನಾಟಕದ ಬಗ್ಗೆ ವಿಶೇಷವಾದ ಒಲವಿದೆ’ ಎಂದರು.

ಒಂದೇ ವೇದಿಕೆಯಲ್ಲಿ ಬದ್ಧ ವೈರಿಗಳು :

ತಾಲೂಕಿನ ಹಳೇಕೋಟೆಯಲ್ಲಿ ಆಯೋಜನೆ ಮಾಡಿದ ವಿಕಸನ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ವೇದಿಕೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಮತ್ತು ಶಾಸಕರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ, ಹೋರಾಡುತ್ತಿರುವ ವಕೀಲ ದೇವರಾಜೇಗೌಡ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ವಿಕಸನ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮವನ್ನು ಕೇಂದ್ರ ಸಚಿವ ಹರ್ದೀಪ್ ಎಸ್.ಪುರಿ ಉದ್ಘಾಟಿಸಿ ಮಾತನಾಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ