ಶಿರೂರು ಗುಡ್ಡ ಕುಸಿತ ದುರಂತಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ: ಸಚಿವ ಮಾಂಕಾಳ ವೈದ್ಯ

KannadaprabhaNewsNetwork |  
Published : Jul 28, 2024, 02:03 AM IST
ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ | Kannada Prabha

ಸಾರಾಂಶ

ಕೇರಳದ ಲಾರಿ ಹೊಳೆಯಲ್ಲಿ ಇರುವುದು ಗೊತ್ತಾಗಿದೆ. ಅದನ್ನು ನೋಡಲು ತೆರಳಲು ಸಾಧ್ಯವಾಗುತ್ತಿಲ್ಲ. ನೌಕಾಸೇನೆ, ಕೋಸ್ಟ್‌ಗಾರ್ಡ್‌ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂಕೋಲಾದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತ ದುರಂತಕ್ಕೆ ಐಆರ್‌ಬಿ(ಐಡಿಯಲ್‌ ರೋಡ್‌ ಬಿಲ್ಡರ್ಸ್‌) ಮತ್ತು ಕೇಂದ್ರ ಸರ್ಕಾರ ನೇರ ಹೊಣೆ ಎಂದು ರಾಜ್ಯ ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಮತ್ತು ಬಂದರು ಖಾತೆ ಸಚಿವ ಮಾಂಕಾಳ ವೈದ್ಯ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಜು.11ರಂದು ಗುಡ್ಡ ಕುಸಿತ ದುರಂತ ಸಂಭವಿಸಿದೆ. ಅವತ್ತಿನಿಂದ ನಾನು ಅಲ್ಲೇ ಇದ್ದೇನೆ. ಬೆಂಗಳೂರಿನ ಅಧಿವೇಶನವನ್ನು ಬಿಟ್ಟು ನಾನು ಮತ್ತು ಶಾಸಕ ಸತೀಶ್‌ ಸೈಲ್‌ ಅಲ್ಲೇ ಇದ್ದೆವು. ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ. ಕಳೆದ 11 ವರ್ಷದಿಂದ ಐಆರ್‌ಬಿ ಕಾಮಗಾರಿ ನಡೆಸುತ್ತಿದ್ದು, ಇನ್ನೂ ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಅವರ ಅವೈಜ್ಞಾನಿಕ ಕಾಮಗಾರಿಯಿಂದ ಈ ದುರಂತ ಸಂಭವಿಸಿದೆ. ಅವರಲ್ಲಿ ಒಂದು ಹಿಟಾಚಿ ಕೂಡ ಇಲ್ಲ. ಅದನ್ನು ಕೂಡ ನಾವು ಬೇರೆ ಕಡೆಯಿಂದ ತರಿಸಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ತಂಡ ಇಂಥದ್ದೇ ಜಾಗದಲ್ಲಿ ಕುಸಿಯುತ್ತದೆ ಎಂದು ಹೇಳಿದ್ದರೂ ಏನೂ ಮಾಡಲಾಗಲಿಲ್ಲ. ಬೇರೆ ರಾಜ್ಯದವರೂ ಸಾವಿಗೀಡಾಗಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಾವು ನ್ಯಾಯವಾಗಿ ಅಲ್ಲಿ ಇದ್ದೇವೆ. ಈಗ ಆಗಬಾರದ್ದು ಆಗಿಹೋಗಿದೆ. ಯಾರೂ ಯೋಚನೆ ಮಾಡದ ರೀತಿಯಲ್ಲಿ ಗುಡ್ಡ ಕುಸಿತವಾಗಿದೆ ಎಂದು ಅವರು ವಿಷಾದಿಸಿದರು.

ಕೇರಳದ ಲಾರಿ ಹೊಳೆಯಲ್ಲಿ ಇರುವುದು ಗೊತ್ತಾಗಿದೆ. ಅದನ್ನು ನೋಡಲು ತೆರಳಲು ಸಾಧ್ಯವಾಗುತ್ತಿಲ್ಲ. ನೌಕಾಸೇನೆ, ಕೋಸ್ಟ್‌ಗಾರ್ಡ್‌ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದರು. ಸಂತ್ರಸ್ತರ ಕುಟುಂಬಕ್ಕೆ ಏನಾದರೂ ಸಹಾಯ ಮಾಡುವುದಿದ್ದರೆ ಮಾಡಿ ಎಂದ ಸಚಿವ ಮಾಂಕಾಳ ವೈದ್ಯ, ಇಲ್ಲಿವರೆಗೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ನಿಖರ ಮಾಹಿತಿ ಯಾರಿಗೂ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುವುದು ಸರಿಯಲ್ಲ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ 1.25 ಲಕ್ಷ ರು. ನೆರವು ನೀಡಿದ್ದೇವೆ ಎಂದರು.ಕಂಪನಿ ಮೇಲೆ ಕೇಸ್‌:

ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿ ಐಆರ್‌ಬಿ ಕಂಪನಿ ಮೇಲೆ ಕೇಸು ದಾಖಲಿಸಲಾಗಿದೆ. ಅರಣ್ಯ ಇಲಾಖೆಯಿಂದಲೂ ಕೇಸು ದಾಖಲಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ತನಿಖೆಗೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಏನೇ ಮಾಡಿದರೂ ಈ ಕಂಪನಿ ಮೂಲ ಬಿಜೆಪಿಯಾಗಿದ್ದು, ಅದನ್ನು ಹೊರತುಪಡಿಸಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದರು.

ಮುಖ್ಯಮಂತ್ರಿ, ಕಂದಾಯ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾವು ರಾಜಕಾರಣ ಮಾಡುವುದಿಲ್ಲ, ಬಡವರಿಗೆ ಸಹಾಯ ಮಾಡುತ್ತೇವೆ. ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಮಾತನಾಡಲು ಸಾಕಷ್ಟಿದೆ. ಅದೇ ಕ್ಷೇತ್ರದಲ್ಲಿ 15 ವರ್ಷ ಶಾಸಕರಾಗಿ, ಮಂತ್ರಿಗಳೂ ಆಗಿದ್ದವರು, ಅವರಿಗೆ ಎನ್‌ಎಚ್‌ಎಐ, ಐಆರ್‌ಬಿ ಯಾರಿಗೆ ಬರುತ್ತದೆ ಎನ್ನುವುದು ಗೊತ್ತಿಲ್ಲವೇ? ಎಂದು ಸಚಿವ ಮಾಂಕಾಳ ವೈದ್ಯ ಪ್ರಶ್ನಿಸಿದರು.

ಸುರತ್ಕಲ್‌ ಸಮುದ್ರ ಮಧ್ಯೆ ಲಂಗರು ಹಾಕಿರುವ ಸರಕು ನೌಕೆಯಿಂದ ಯಾವುದೇ ರೀತಿಯ ಅಪಾಯ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕೋಸ್ಟ್‌ ಗಾರ್ಡ್‌ ಪರಿಶೀಲನೆ ನಡೆಸುತ್ತಿದ್ದು, ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಈಗಾಗಲೇ ನೌಕೆಯಲ್ಲಿ ಕಾಣಿಸಿದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಈ ಕುರಿತು ನಿಗಾ ಇರಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!