ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ- ಖರ್ಗೆ

KannadaprabhaNewsNetwork | Published : Mar 17, 2025 12:31 AM

ಸಾರಾಂಶ

ದೇಶದ ಶಿಕ್ಷಣ ವ್ಯವಸ್ಥೆ ಆತಂಕದಲ್ಲಿದೆ. ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ, ಅದರಲ್ಲಿಯೂ ಸರ್ಕಾರಿ ಶಾಲೆಗಳ ಬಗ್ಗೆ ತೀರಾ ನಿರ್ಲಕ್ಷ್ಯ ವಹಿಸುತ್ತಿದ್ದು, ದೇಶದ ಬಡ ಮಕ್ಕಳ ಭವಿಷ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಮಂಕಾಗಲಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಗದಗ: ದೇಶದ ಶಿಕ್ಷಣ ವ್ಯವಸ್ಥೆ ಆತಂಕದಲ್ಲಿದೆ. ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ, ಅದರಲ್ಲಿಯೂ ಸರ್ಕಾರಿ ಶಾಲೆಗಳ ಬಗ್ಗೆ ತೀರಾ ನಿರ್ಲಕ್ಷ್ಯ ವಹಿಸುತ್ತಿದ್ದು, ದೇಶದ ಬಡ ಮಕ್ಕಳ ಭವಿಷ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಮಂಕಾಗಲಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಭಾನುವಾರ ಇಲ್ಲಿನ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರದ ಸೂಕ್ತ ಅನುದಾನ ನೀಡುತ್ತಿಲ್ಲ. ನವೋದಯ, ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶೇ. 50 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಿಂದ ವಿದ್ಯಾರ್ಥಿಗಳ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತಿವೆ. ಈ ಹಿಂದೆ ಜವಾಹರಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರು. ಆದರೆ, ಇಂದು (ಕೇಂದ್ರ ಸರ್ಕಾರ) ಆ ವ್ಯವಸ್ಥೆಯನ್ನು ಕಡಿಮೆ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

90 ಸಾವಿರ ಶಾಲೆಗಳು ಬಂದ್: ದೇಶಾದ್ಯಂತ ಕೇಂದ್ರ ಸರ್ಕಾರದ ಅಧೀನದಲ್ಲಿರುವ 90 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿವೆ. ಅದರಲ್ಲಿ 50 ಸಾವಿರಕ್ಕೂ ಅಧಿಕ ಶಾಲೆಗಳುವುತ್ತರ ಪ್ರದೇಶ, ಬಿಹಾರದಲ್ಲಿಯೇ ಬಂದ್ ಆಗಿವೆ. ಇನ್ನುಳಿದ ರಾಜ್ಯಗಳಲ್ಲಿ 40 ಸಾವಿರ ಶಾಲೆಗಳು ಸ್ಥಗಿತಗೊಂಡಿವೆ. ಇದರಿಂದ ನಮ್ಮ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.

ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 5400 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ, ಹಾಗಾಗಿ ಕಳೆದ ವರ್ಷ 13 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಯುನಿವರ್ಸಿಟಿಗಳಿಂದ ಹೊರ ಬಂದಿದ್ದಾರೆ. ಇದು ಕೂಡಾ ದೇಶದ ಬೆಳವಣಿಗೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ ಎಂದರು ಖರ್ಗೆ.

ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ: ದೇಶದಲ್ಲಿರುವ ಶ್ರೀಮಂತರು ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡಬೇಕು. ಅಲ್ಲಿನ ಮಕ್ಕಳಿಗೆ ನಗರ ಪ್ರದೇಶಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಕಿವಿಮಾತು ಹೇಳಿದ ಖರ್ಗೆ, ಇದರಿಂದ ನಮ್ಮ ಹಿಂದಿನ ಶಿಕ್ಷಣ ವ್ಯವಸ್ಥೆ ಉಳಿಯಲು ಸಾಧ್ಯ ಎಂದರು.

ಕಳೆದ ನಾಲ್ಕೈದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ವ್ಯಾಪಕವಾಗಿ ಬಂದ್ ಆಗುತ್ತಿವೆ. ಖಾಸಗಿ ಶಾಲೆಗಳು ಶೇ. 14ರಷ್ಟು ಹೆಚ್ಚಳವಾಗಿವೆ. ಇದು ಬಡವರ ಮಕ್ಕಳ ಶಿಕ್ಷಣಕ್ಕೆ ಮಾರಕವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣ ಕ್ಷೇತ್ರ ಉಳಿಸಿ, ಬೆಳೆಸಲು ಪಣ ತೊಟ್ಟು ಕೆಲಸ ಮಾಡಬೇಕಾದ ಅನಿರ್ವಾಯತೆ ಎದುರಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಡಕಿನ ಮಾತು ಬಿಡಿ: ಕೇಂದ್ರ ಸರ್ಕಾರ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ಇದರಿಂದಾಗಿ ನಾವೆಲ್ಲ ಹಲವಾರು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ. ಈಗಿನಿಂದ ನಾವೆಲ್ಲ ಪಕ್ಷ, ಪಂಗಡ, ಜಾತಿ ಭೇದ ಮರೆತು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಯಾರೂ ಈ ವಿಷಯದಲ್ಲಿ ಒಡಕಿನ ಮಾತನ್ನು ಆಡದೇ ಒಗ್ಗಟ್ಟಾಗಿ ಇದ್ದಾಗ ಮಾತ್ರ ನಮ್ಮ ನಾಡು, ನಮ್ಮ ಹಕ್ಕುಗಳ ರಕ್ಷಣೆಯಾಗಲು ಸಾಧ್ಯ ಎಂದು ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಎಚ್‌ಪಿ ಹೆಸರಿನಲ್ಲಿ ಶಿಷ್ಯವೇತನ ನೀಡಿ: ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದಿ.ಎಚ್‌.ಕೆ.ಪಾಟೀಲ ಅವರ ಹೆಸರಿನಲ್ಲಿ ಶಿಷ್ಯವೇತನ ಆರಂಭಿಸಿ ಬಡವರ ಮಕ್ಕಳ ಓದಿಗೆ ನೆರವಾಗುವ ಮೂಲಕ ಆ ಮಹಾನ್‌ ನಾಯಕನಿಗೆ ಗೌರವ ನೀಡಿ ರಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.

Share this article