ಕೊಪ್ಪಳ: ದೇಶದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಣ್ಣ ಬಣ್ಣದ ಮಾತು ಆಡಿ ನಂತರದಲ್ಲಿ ಯುವಕರಿಗೆ ಉದ್ಯೋಗ ನೀಡದೇ ಅನ್ಯಾಯ ಎಸಗಿರುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡದೇ ತಾರತಮ್ಯ ಎಸಗಿದೆ. ಹೀಗಾಗಿ ಅನೇಕ ರಸ್ತೆ ಯೋಜನೆಗಳು ಸ್ಥಗಿತಗೊಂಡವು. ಸಂಗಣ್ಣ ಕರಡಿ ಅಧಿಕಾರಾವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೆಲ ಯೋಜನೆಗಳಿಗೆ ಬಿಜೆಪಿಯವರೇ ಅಡ್ಡಗಾಲು ಹಾಕಿದ್ದರಿಂದ ಭಾರತ್ ಮಾಲಾ ಯೋಜನೆ ಕೂಡ ನಿಂತಿತು. ಇದು ಅಭಿವೃದ್ಧಿಗೆ ಹಿನ್ನಡೆಯಾಯಿತು. ಸದ್ಯ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು ಲೋಕಸಭಾ ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗೆ ಚಾಲನೆ ನೀಡುವ ಜತೆಗೆ ಹೊಸ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತೇವೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಳೆದ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಲೋಕಸಭಾ ವ್ಯಾಪ್ತಿಯ ಎಲ್ಲ ಕ್ಷೇತ್ರಕ್ಕೂ ಸಮಾನ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿ ಮಾಡಿದ್ದೇನೆ. ಅಂದಿನ ಬಿಜೆಪಿ ನಾಯಕರಿಂದಲೇ ಕೆಲವು ಯೋಜನೆಗಳು ಸ್ಥಗಿತಗೊಂಡವು. ಸ್ವಾರ್ಥ ರಾಜಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಗೌಣವಾಯಿತು. ವಿಮಾನ ನಿಲ್ದಾಣ, ಭಾರತ್ ಮಾಲಾ ಯೋಜನೆ, ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸಿನ ಯೋಜನೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸಿದರೆ ಎಲ್ಲ ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.ಕೇವಲ ದ್ವೇಷ ಭಾಷಣದ ಮೂಲಕ ಜನರ ದಾರಿತಪ್ಪಿಸುವ ಬಿಜೆಪಿ ನಂಬದೇ ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅಭಿವೃದ್ಧಿಗೆ ಸಹಕರಿಸಿ. ನಿಮ್ಮ ಒಂದು ಮತ ಪ್ರಜಾಪ್ರಭುತ್ವ ರಕ್ಷಣೆ, ಸಂವಿಧಾನ ಉಳಿವಿಗೆ ಸಹಕಾರಿಯಾಗಲಿದೆ. ಸುಳ್ಳಿನ ಆಶ್ವಾಸನೆಗಳಿಗೆ ಮರುಳಾಗದೇ ಕಾಂಗ್ರೆಸ್ ಗಟ್ಟಿಗೊಳಿಸಿ ಎಂದರು.ಕಮಲ ತೊರೆದು ಕೈ ಹಿಡಿದರು: ನಗರದ ಮಾಜಿ ಸಂಸದ ಸಂಗಣ್ಣ ಕರಡಿ ನಿವಾಸದಲ್ಲಿ ತಾಲೂಕಿನ ಕಾಮನೂರು, ಜಬ್ಬಲಗುಡ್ಡ , ಗೊಂಡಬಾಳದ ಗ್ರಾಮದ ಅನೇಕ ಮುಖಂಡರು ಬಿಜೆಪಿ ತೊರೆದು ಶಾಸಕ ಮತ್ತು ಮಾಜಿ ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.