ಗೋಡಂಬಿ ಉತ್ಪಾದನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ: ಸಚಿವೆ ಶೋಭಾ ಕರಂದ್ಲಾಜೆ

KannadaprabhaNewsNetwork |  
Published : Nov 18, 2025, 02:00 AM IST
ಕಾಜು ಶತಮಾನೋತ್ಸವ ಸಮ್ಮೇಳನಕ್ಕೆ ಮಂಗಳೂರಲ್ಲಿ ಚಾಲನೆ  | Kannada Prabha

ಸಾರಾಂಶ

ಕರ್ನಾಟಕ ಗೋಡಂಬಿ ತಯಾರಕರ ಸಂಘದ ವತಿಯಿಂದ ಇಲ್ಲಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ‘ಕಾಜು ಶತಮಾನೋತ್ಸವ ಸಮ್ಮೇಳನ-2025’ ಉದ್ಘಾಟನೆಗೊಂಡಿತು.

ಮಂಗಳೂರು: ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೇರು ಬೀಜ ಉತ್ಪಾದನೆಯ ಕೊರತೆ ಇದ್ದು, ಇದರಿಂದಾಗಿ ವಿದೇಶದಿಂದ ಆಮದಿನ ಅನಿವಾರ್ಯತೆ ಎದುರಾಗಿದೆ. ಗೇರು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗೇರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ದಿಮೆ ಮತ್ತು ಎಂಎಸ್‌ಎಂಇ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕರ್ನಾಟಕ ಗೋಡಂಬಿ ತಯಾರಕರ ಸಂಘದ ವತಿಯಿಂದ ಇಲ್ಲಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಶುಕ್ರವಾರ ಮೂರು ದಿನಗಳ ‘ಕಾಜು ಶತಮಾನೋತ್ಸವ ಸಮ್ಮೇಳನ-2025’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ 4 ಲಕ್ಷ ಟನ್‌ ಗೇರು ಬೀಜದ ಬೇಡಿಕೆ ಇದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗೇರು ಬೀಜ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಆಫ್ರಿಕಾ, ವಿಯೆಟ್ನಾಂ ದೇಶಗಳಿಂದ ಗೇರು ಆಮದು ಮಾಡಿಕೊಳ್ಳುವ ಪರಿಸ್ಥಿತಿ ತಲೆದೋರಿದೆ. ವಿಯೆಟ್ನಾಂನಲ್ಲಿ ಹೆಕ್ಟೇರ್‌ಗೆ 1ರಿಂದ 2 ಸಾವಿರ ಕೇಜಿ ಗೇರು ಉತ್ಪಾದನೆಯಾದರೆ, ಭಾರತದಲ್ಲಿ ಅದರ ಪ್ರಮಾಣ ಹೆಕ್ಟೇರ್‌ಗೆ 674 ಕೇಜಿ ಮಾತ್ರ. ಇದಕ್ಕೆ ಹವಾಮಾನ ಆಧಾರಿತ ಬೆಳೆ ಹಾಗೂ ಗೇರು ಬೀಜಗಳ ಗುಣಮಟ್ಟ ಕಾರಣವಾಗಿದೆ ಎಂದು ಅವರು ಹೇಳಿದರು. ಸಾಮಾಜಿಕ ಭದ್ರತೆಗೆ ಕ್ರಮ:

ಗೇರು ಉತ್ಪಾದನಾ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಗೇರು ಕಾರ್ಮಿಕರ ಆರೋಗ್ಯದ ಸಲುವಾಗಿ ಇಎಸ್‌ಐ ಆಸ್ಪತ್ರೆಯ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳ ಜೊತೆ ಜೋಡಿಸಲಾಗುವುದು. ಈ ಕಾರ್ಮಿಕರಿಗೆ ಸೊಸೈಟಿ ಮೂಲಕ ಆಸ್ಪತ್ರೆ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಗುವುದು. ಇ ಶ್ರಮ ಯೋಜನೆಯಡಿ 30 ಕೋಟಿ ಕಾರ್ಮಿಕರು ನೋಂದಣಿಯಾಗಿದ್ದು, ಅವರಿಗೆಲ್ಲ ಪಿಂಚಣಿ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಗೇರು ಬೀಜ ಸೇರಿದಂತೆ ವಿವಿಧ ಉತ್ಪನ್ನಗಳ ರಫ್ತಿಗೆ ಅನುಕೂಲವಾಗಲು ಎಲ್ಲ ಜಿಲ್ಲೆಗಳಲ್ಲೂ ಆಹಾರ ಗುಣಮಟ್ಟ ಸರ್ಟಿಫಿಕೆಟ್‌ ನೀಡುವ ಬಗ್ಗೆ ರಾಜ್ಯ ಸರ್ಕಾರಗಳ ಜೊತೆ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ, ಹಿಂದಿನ ಕಾಲದಲ್ಲಿ ಬೀಡಿ ಉದ್ಯಮದಂತೆ ಈಗ ಬದುಕಿಗೆ ಗೋಡಂಬಿ ಉದ್ಯಮ ಆಧಾರವಾಗಿದೆ. ಸಭೆ, ಸಮಾರಂಭಗಳಲ್ಲಿ ವೀಳ್ಯದೆಲೆ ಬದಲಿಗೆ ಈಗ ಗೋಡಂಬಿಯನ್ನು ಇರಿಸುವ ಮೂಲಕ ಅದಕ್ಕೂ ಗೌರವ ಪ್ರಾಪ್ತವಾಗುತ್ತಿದೆ. ಗೋಡಂಬಿ ಕೃಷಿಯನ್ನು ಉತ್ತೇಜಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಮುಂದಾಗಬೇಕು ಎಂದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗೇರು ಉದ್ದಿಮೆ ಈಗ ವಿಶ್ವವ್ಯಾಪಿಯಾಗಿಯಾಗಿದೆ. ಈ ಮೂಲಕ ಕರಾವಳಿಯ ಅಸ್ಮಿತೆಯನ್ನು ಎಲ್ಲೆಡೆಗೆ ಪಸರಿಸಿದೆ ಎಂದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಭಾಗೀರಥಿ ಮುರುಳ್ಯ, ಸ್ಪೈನ್‌ ಇಂಟರ್‌ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಅಶೋಕ್‌ ಕೃಷ್ಣನ್‌, ನೆದರ್‌ಲ್ಯಾಂಡ್‌ನ ಇಂಟರ್‌ನ್ಯಾಷನಲ್‌ ಖರೀದಿದಾರ ರೇನೋ ಗಾರ್ಡಿಯನ್‌, ಇಟಿಜಿ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಬಾರ್ಕೂರ್‌ ಮತ್ತಿತರರಿದ್ದರು.

ಕರ್ನಾಟಕ ಗೋಡಂಬಿ ತಯಾರಕರ ಸಂಘದ ಅಧ್ಯಕ್ಷ ಎ.ಕೆ.ರಾವ್‌ ಸ್ವಾಗತಿಸಿದರು. ಕಾಜು ಶತಮಾನೋತ್ಸವ ಸಮ್ಮೇಳನ ಸಮಿತಿ ಸಂಚಾಲಕ ಕಲ್ಬಾವಿ ಪ್ರಕಾಶ್‌ ರಾವ್‌ ಪ್ರಾಸ್ತಾವಿಕ ಮಾತನಾಡಿದರು. ಸಮ್ಮೇಳನದ ಅಂಗವಾಗಿ ಗೋಡಂಬಿಯ ವಿವಿಧ ಉತ್ಪನ್ನಗಳ ಪ್ರದರ್ಶನ, ಮಾರಾಟ ಹಮ್ಮಿಕೊಳ್ಳಲಾಗಿದೆ.

PREV

Recommended Stories

ಕಸ ಸುಡಲು ಹಾಕಿದ ಬೆಂಕಿಯಿಂದ ಕುಡಿಯುವ ನೀರಿನ ಪೈಪ್ ಲೈನ್‌ಗೆ ಹಾನಿ
ಚಂಡಿಗಢ ಮುಖ್ಯ ಕಾರ್ಯದರ್ಶಿ ರಾಜೇಶ್‌ ಪ್ರಸಾದ್‌ಗೆ ಅಭಿನಂದನೆ