ಕುಕನೂರು: ಕೇಂದ್ರ ಸರ್ಕಾರದ ಯೋಜನೆಗಳು ಕಡುಬಡವರಿಗೆ ವರದಾನ ಎಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪಂಪನಗೌಡ ಹೇಳಿದರು.
ಪಟ್ಟಣದ ಪಪಂ ಆವರಣದಲ್ಲಿ ಶುಕ್ರವಾರ ಜರುಗಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಭಾರತ ದೇಶದಲ್ಲಿ ಸಾಕಷ್ಟು ಯೋಜನೆಗಳು ಕಡುಬಡವರಿಗೆ ಅನುಕೂಲವಾಗಿದೆ. ಆ ಎಲ್ಲ ಯೋಜನೆಗಳು ಇನ್ನಷ್ಟು ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಪ್ರಚಾರ ಕಾರ್ಯದಲ್ಲಿ ತೋಡಗಿದೆ. ೨೦೧೪ರಲ್ಲಿ ಜನ ಧನ್ ಯೋಜನೆ ಜಾರಿಗೆ ಬಂದ ಮೇಲೆ ದೇಶದಲ್ಲಿ ೫೪ ಕೋಟಿ ಜನರಿಗೆ ಬ್ಯಾಂಕ್ ಖಾತೆಗಳನ್ನು ಜಿಯೋ ಅಕೌಂಟ್‌ನಲ್ಲಿ ತೆರೆಯಲಾಯಿತು. ೨೦೧೪-೧೫ರಲ್ಲಿ ಜೀವ ವಿಮಾ ಜಾರಿಗೆ ತರಲಾಯಿತು. ಪ್ರಧಾನ ಮಂತ್ರಿ ರಸ್ತೆ ಸುರಕ್ಷಾ ಯೋಜನೆ, ಅಟಲ್ ಪೆನಶೇನ್ ಯೋಜನೆ, ಆಯುಷ್ಮಾನ್ ಕಾರ್ಡ್, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಂದ ದೇಶದ ಪ್ರತಿಯೊಬ್ಬರಿಗೆ ಅನುಕೂಲವಾಗಿದೆ ಎಂದರು.ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ, ಮಾಜಿ ಸಚಿವ ಹಾಲಪ್ಪ ಆಚಾರ್ ಶಾಸಕರಿದ್ದಾಗ ಕೇಂದ್ರ ಸರ್ಕಾರದ ಅಂಚೆ ಇಲಾಖೆ ಜೀವ ವಿಮಾ ಪ್ರೀಮಿಯಂನ್ನು ೧೦೦೦ ಕಾರ್ಯಕರ್ತರಿಗೆ ₹೧೦ ಲಕ್ಷ ವೆಚ್ಚದಲ್ಲಿ ಮಾಡಿಸಿಕೊಟ್ಟಿದ್ದಾರೆ. ಇಂತಹ ಕಾರ್ಯಕ್ರಮವನ್ನು ಅಧಿಕಾರಿಗಳು ಪೂರ್ವಭಾವಿ ಸಭೆ ಕರೆದು ಎಲ್ಲ ವಾರ್ಡ್‌ಗಳಿಂದ ಜನರನ್ನು ಕರೆಯಿಸಿ ಕಾರ್ಯಕ್ರಮ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಹೇಳಿದರು.ಗ್ರೇಡ್-೨ ತಹಸೀಲ್ದಾರ್ ಮುರಳೀಧರ್ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪಣ್ಣ, ಪಪಂ ಮುಖ್ಯಾಧಿಕಾರಿ ಪಿ.ಸುಬ್ರಮಣ್ಯ, ಕೆನರಾ ಬ್ಯಾಂಕ್ ಮ್ಯಾನೇಜರ್ ಅಲ್ಲಾಭಕ್ಷಿ ನಧಾಪ್, ಪೊಸ್ಟ್ ಮಾಸ್ಟರ್ ವಿಷ್ಣು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಬಿ.ಎಂ. ಮಾಳೇಕೊಪ್ಪ, ಆರೋಗ್ಯ ಇಲಾಖೆ ಗೋವಿಂದರಾವ್, ಚನ್ನಬಸಯ್ಯ ಸರಗಣಚಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು.