ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ: ದರ್ಶನಾಪುರ

KannadaprabhaNewsNetwork |  
Published : Oct 02, 2026, 01:15 AM IST
ಮಾಜಿ ಸಚಿವ ಹಾಗೂ ಶಹಾಪುರ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ | Kannada Prabha

ಸಾರಾಂಶ

Central Government should waive farmers' loans: Darshanapura

- ಬಂಡವಾಳಶಾಹಿಗಳ ಸಾಲಮನ್ನಾ ಮಾಡುವ ಕಾಳಜಿ ರೈತರಿಗೂ ತೋರಲಿ

-ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ದರ್ಶನಾಪುರ ಕಿಡಿ

--

ಕನ್ನಡಪ್ರಭ ವಾರ್ತೆ ಕೆಂಭಾವಿ

ಬರ ವಿಚಾರದಲ್ಲಿ ಬಿಜೆಪಿಯವರ ಕೊಡುಗೆ ಏನು? ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಶಾಸಕರು ಮತ್ತು ಸಂಸದರು ರಾಜ್ಯದ ಬರದ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಬೇಕಿತ್ತು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಶಾಸಕರ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಬರ ಸಂದರ್ಭದಲ್ಲಿ ನ್ಯಾಯಾಲಯದ ಮೂಲಕ ಕೇಂದ್ರದಿಂದ ಪರಿಹಾರ ಪಡೆದುಕೊಂಡಿದ್ದೆವು. ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುತ್ತಿದೆ, ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಹೇಳಿದರು.

ಬರಗಾಲದ ಸಂಪೂರ್ಣ ಚಿತ್ರಣವನ್ನು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಹೀಗಿರುವಾಗ ಕೇಂದ್ರದ ಅಧ್ಯಯನ ತಂಡ ಖಾಲಿ ಕೈಯಲ್ಲಿ ಬಂದು ಪರಿಶೀಲನೆ ನಾಟಕ ಮಾಡುವುದು ಯಾವ ಲೆಕ್ಕ? ಮೊದಲು ರೈತರಿಗೆ ಪರಿಹಾರ ಘೋಷಿಸಿ, ನಂತರ ಬಂದು ನೋಡಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸಿದರು.

ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವಲ್ಲಿ ಕಾಳಜಿ ತೋರುವ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಬರಗಾಲ ಆವರಿಸಿದ ಹಿನ್ನೆಲೆ ರೈತರ ಸಾಲ ಮನ್ನಾ ಮಾಡಿ ರೈತಪರ ಕಾಳಜಿ ತೋರಿಸಲಿ ಎಂದರು.

ರಾಜ್ಯ ಸರ್ಕಾರ ಈಗ ತಾತ್ಕಾಲಿಕವಾಗಿ ₹2500 ಪರಿಹಾರ ನೀಡುತ್ತಿದೆ, ಮುಂಬರುವ ದಿನಗಳಲ್ಲಿ ಹೆಚ್ಚಿನ ಪರಿಹಾರ ನೀಡಲಾಗುವುದು. ಈಗ, ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ಹಣ ಪಾವತಿ ಮಾಡಲಿ ಎಂದ ದರ್ಶನಾಪುರ, ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ ? ಹೆಚ್ಚಿನ ಪರಿಹಾರ ಹಣ ನೀಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಬಿಜೆಪಿ ನಾಯಕರು ಕೇಂದ್ರಕ್ಕೆ ಕೇಳುತ್ತಿಲ್ಲ ಎಂದು ಟೀಕಿಸಿದ ಅವರು, ತೈಲ, ಗ್ಯಾಸ್ ದರ ಏರಿಕೆ ಹೆಚ್ಚಾಗಿದೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಲಗಿದ್ದಾರಾ ? ಎಂದು ಆರ್. ಅಶೋಕ್‌ ವಿರುದ್ಧ ಶಾಸಕ ದರ್ಶನಾಪುರ ಗರಂ ಆದರು. ಪಿಎಂ ಮೋದಿಗೆ ಕೇಳುವಷ್ಟು ತಾಕತ್ತು ಬಿಜೆಪಿ ಅವರಲ್ಲಿ ಇಲ್ಲ ಎಂದು ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳು ಹೇಳಿ ನಾಟಕ ಮಾಡುವ ಅವಶ್ಯಕತೆ ನನಗಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದ್ದೇನೆ, ಆದ್ದರಿಂದಲೇ ಈ ಭಾಗದ ಜನರು ಐದು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ ಎಂದು ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನಂತರ ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

...ಬಾಕ್ಸ್‌....

ನಾನು ಪರ್ಸೆಂಟೇಜ್ ಪಡೆದಿಲ್ಲ: ದರ್ಶನಾಪುರ

ವಿರೋಧ ಪಕ್ಷದವರಿಗೆ ಮಾತನಾಡಲು ವಿಷಯ ಸಿಗದಿದ್ದಾಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ ಮಾಜಿ ಸಚಿವ, ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಇಂದಿನವರೆಗೂ ಯಾವುದೇ ಗುತ್ತಿಗೆದಾರರಿಂದ ನಾನು ಪರ್ಸೆಂಟೇಜ್ ಪಡೆದಿಲ್ಲ ಎಂದು ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದರು. ಕೆಂಭಾವಿ ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ತಾರತಮ್ಯ ಮಾಡಿಲ್ಲ. ಕೆಂಭಾವಿ ಬಗ್ಗೆ ವಿಶೇಷ ಕಾಳಜಿ ಇದ್ದು, ತಾಲೂಕು ಬೇರೆಯಾಗಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಿವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.

ಕೆಂಭಾವಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ, ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ, ಶುದ್ಧ ಕುಡಿವ ನೀರಿಗಾಗಿ ಪಟ್ಟಣಕ್ಕೆ ₹40 ಕೋಟಿ, ₹250 ಕೋಟಿ ವೆಚ್ಚದಲ್ಲಿ 220 ಕೆವಿ ವಿದ್ಯುತ್ ಸ್ಥಾವರ, ಸಿಸಿ ರಸ್ತೆ ಚಂಡಿ ನಿರ್ಮಾಣಕ್ಕೆ ₹6 ಕೋಟಿ, ಪೊಲೀಸ್‌ ವಸತಿಗೃಹ, ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣ ಸೇರಿದಂತೆ ಈ ಭಾಗದ ದೇವಸ್ಥಾನ-ಮಠಮಾನ್ಯಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ ಎಂದರು.

ಶಿವಮಹಾಂತ ಚಂದಾಪುರ, ಸಿದ್ದನಗೌಡ ಪೊಲೀಸ ಪಾಟೀಲ, ವಾಮನರಾವ ದೇಶಪಾಂಡೆ, ಬಸನಗೌಡ ಚಿಂಚೋಳಿ, ಬಾಪುಗೌಡ ಹುಣಸಗಿ, ಸಾಹೇಬಲಾಲ ಆಂದೇಲಿ, ಮಹಿಪಾಲರೆಡ್ಡಿ ಡಿಗ್ಗಾವಿ, ರಮೇಶ ಕೊಡಗಾನೂರ, ಶಿವಪ್ಪ ಕಂಬಾರ ಪುರಸಭೆ ಸದಸ್ಯರು, ಕಾರ್ಯಕರ್ತರು ಇದ್ದರು.

-

1ವೈಡಿಆರ್5 : ಮಾಜಿ ಸಚಿವ ಹಾಗೂ ಶಹಾಪುರ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ

1ವೈಡಿಆರ್‌6 : ಕೆಂಭಾವಿ ಪಟ್ಟಣದ ವಾರ್ಡ್‌ ನಂ.3 ರಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯನ್ನು ಗುರುವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯ ಶಾನುಭೋಗರ ಬೀದಿಯಲ್ಲಿ ಸಂಭ್ರಮದ ಗಣೇಶೋತ್ಸವ
ಹಿಂದೂ ಸಮಾಜ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ: ಶ್ರೀಕಾಂತ್ ಶೆಟ್ಟಿ