)
- ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ, ಬೆಳೆವಿಮೆ ವ್ಯವಸ್ಥೆ ಪರಿಣಾಮಕಾರಿ ಜಾರಿಗೊಳಿಸಲು ಒತ್ತಾಯ । ರೈತ ಹುತಾತ್ಮರ ದಿನಾಚರಣೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯದ ರೈತರ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುವ ಜೊತೆಗೆ ಬೆಳೆ ನಷ್ಟಕ್ಕೀಡಾದ ರೈತರಿಗೆ ವೈಜ್ಞಾನಿಕ ಪರಿಹಾರ, ಬೆಳೆ ವಿಮೆ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿ, ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.ತಾಲೂಕಿನ ಆನಗೋಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಹುತಾತ್ಮ ರೈತರ ಸ್ಮಾರಕ ಬಳಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಹಾಗೂ ಜಿಲ್ಲೆಯ ವಿವಿಧ ರೈತ ಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ದಿವಂಗತ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ಧನೂರು ನಾಗರಾಜಾಚಾರ್ ಅವರ 34ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯಲ್ಲಿ ರೈತ ಹುತಾತ್ಮರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ರೈತರ ಕಣ್ಣೀರೊರೆಸುವ ಕೆಲಸ ಕೇಂದ್ರ ಸರ್ಕಾರದಿಂದ ಆಗಬೇಕು ಎಂದರು.
ದಶಕಗಳ ಹಿಂದೆ ಆನಗೋಡು ಬಳಿ ರಸಗೊಬ್ಬರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ರೈತರು ತೀವ್ರ ಸ್ವರೂಪದ ಹೋರಾಟ ನಡೆಸಿದ್ದರು. ಆಗ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ರೈತರಾದ ಕಲ್ಲಿಂಗಪ್ಪ, ನಾಗರಾಜಾಚಾರ್ ಹುತಾತ್ಮರಾಗಿದ್ದರು. ಇಂತಹ ರೈತ ಹುತಾತ್ಮರ ತ್ಯಾಗ, ಬಲಿದಾನವನ್ನು ನಾವೆಂದಿಗೂ ಮರೆಯಬಾರದು. ನಾಡಿಗೆ ಅನ್ನ ನೀಡುವ ರೈತರು ದೈವಸಮಾನ. ರೈತರನ್ನು ಗೌರವಿಸುವ ಜೊತೆಗೆ ಸಂಕಷ್ಟದ ವೇಳೆ ಅನ್ನದಾತರ ಬೆನ್ನಿಗೆ ಎಲ್ಲರೂ ನಿಲ್ಲಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಶಾಬನೂರು ಎಚ್.ಆರ್. ಲಿಂಗರಾಜ, ಹೊನ್ನೂರು ಮುನಿಯಪ್ಪ, ರಾಜಶೇಖರ, ಬುಳ್ಳಾಪುರ ಹನುಮಂತಪ್ಪ, ಚನ್ನಬಸಪ್ಪ, ಮೋಹನ್, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಹಲ್ದಿ ಬಸವರಾಜ, ಬುಳ್ಳಾಪುರ ರೇವಣ್ಣ, ಆನಗೋಡು ಸಿದ್ದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ. ಚಂದ್ರಶೇಖರ್, ಆನಗೋಡು ಕರಿಬಸಪ್ಪ, ಬಸಣ್ಣ, ಪ್ರಕಾಶ, ನಸ್ರುಲ್ಲಾ, ರವಿ, ಹೇರಳಪ್ಪ, ಹೆಬ್ಬಾಳು ರುದ್ರಮುನಿ, ರೈತರು, ಸಂಘಟನೆಗಳ ಪದಾಧಿಕಾರಿಗಳು, ಹುತಾತ್ಮ ರೈತರ ಕುಟುಂಬ ಸದಸ್ಯರು, ಗ್ರಾಮಸ್ಥರು ಇದ್ದರು.
(ಕೋಟ್)
ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ರೈತರಿಗಾಗಿ ₹72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಅದೇ ರೀತಿ ಈಗಿನ ಸಂಕಷ್ಟ ವೇಳೆ ಕೇಂದ್ರ ಸರ್ಕಾರ ರೈತರ ಸಾಲದ ಹೊರೆಯನ್ನು ಕಡಿಮೆ ಮಾಡಬೇಕು. ರೈತರ ನೋವಿಗೆ ಸ್ಪಂದಿಸಬೇಕು. ಸಾಲದ ಹೊರೆ, ಬೆಳೆ ನಷ್ಟ ಹಾಗೂ ಮಾರುಕಟ್ಟೆ ಸಮಸ್ಯೆ, ಸಂಕಷ್ಟದಲ್ಲಿರುವ ರೈತರಿಗೆ ಆಸರೆ ಆಗಬೇಕು. ರೈತ ಹೋರಾಟದಲ್ಲಿ ಹುತಾತ್ಮರಾದ ಕುಟುಂಬಗಳ ಜೀವನಕ್ಕೆ ಆಸರೆ ಆಗುವಂತೆ ಹಸುಗಳನ್ನು ಕಲ್ಪಿಸುತ್ತೇವೆ. ಆ ಕುಟುಂಬಗಳ ಬದುಕಿಗೆ ಅಗತ್ಯ ಸಹಕಾರ ನೀಡುವುದು ಸಮಾಜದ ಜವಾಬ್ದಾರಿ ಎಂದು ಸಚಿವ ಬಸವಂತಪ್ಪ ತಿಳಿಸಿದರು.
-ಫೋಟೋ ಇದೆ.